ಟೊಮ್ ಪೀರೆಸ್ (Tome Pires) ೧೬ನೆಯ ಶತಮಾನದ ಪೂರ್ವಾರ್ಧದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು, ಇತ್ತೀಚಿನವರೆಗೂ ಮರೆತುಹೋಗಿದ್ದ ಒಬ್ಬ ಪೋರ್ಚುಗೀಸ್ ಪ್ರವಾಸಿ. ಗೋವಾ ರಾಜ್ಯಸ್ಥಾಪನೆ ಮಾಡಿದ ಅಲ್ಬುಕರ್ಕ್ ಮುಂತಾದವರು ಹಾಗೂ ಬಾರ್ಬೊಸಾ ಎಂಬ ಹೆಸರಾಂತ ಪ್ರವಾಸಿಗಳ ಮುಂದೆ ಇವನು ಸಾಮಾನ್ಯನಾಗಿ ಕಂಡರೂ ಇವನ ಪ್ರವಾಸ ಕಥನ ಸಾಮಾನ್ಯವಾದುದೇನಲ್ಲ. ಆದರೆ ಇತ್ತೀಚಿನವರೆಗೆ ಇವನ ಪ್ರವಾಸ ಕಥನ ಕತ್ತಲೆಯಲ್ಲಿ ಮರೆಯಾಗಿತ್ತು.
ಪೀರೆಸ್ ರಾಜಕುಮಾರ ಅಫೊನ್ಸೊನ ಸಾಮಾನ್ಯ ವೈದ್ಯನಾಗಿ ೧೫೧೧ರಲ್ಲಿ ಇಂಡಿಯಾಕ್ಕೆ ಬಂದ. ಎರಡೂವರೆ ವರ್ಷಗಳ ಕಾಲ ಪೋರ್ಚುಗೀಸರು ಹೊಸದಾಗಿ ಗೆದ್ದುಕೊಂಡ ಮಲಕ್ಕದಲ್ಲಿ ಇದ್ದ. ಅಲ್ಲಿ ಈತ ತನ್ನ ‘ಸೂಮ ಓರಿಯಂಟಲ್’ (Suma-Orienta) ಅಂದರೆ ‘ಪೌರ್ವಾತ್ಯದ ಸಾರ’ ಎಂಬ ತನ್ನ ಪ್ರವಾಸ ಕಥನ ಬರೆದ. ಅನಂತರ ಈತ ಚೀನಾಕ್ಕೆ ಯೂರೋಪಿನ ಪ್ರಥಮ ರಾಯಭಾರದ ಮುಖಂಡನಾಗಿ ಹೋಗಿ, ಅಲ್ಲಿಯೇ ಬಹುಶಃ ೧೫೪೦ರಲ್ಲಿ ಕಾಲವಾದ. ಇತ್ತೀಚಿನವರೆಗೂ ಬೆಳಕಿಗೆ ಬಾರದಿದ್ದ ಈತ ಐತಿಹಾಸಿಕ ದೃಷ್ಟಿಯಿಂದ ಬಹು ಉಪಯುಕ್ತ ವಾದ ಪ್ರವಾಸ ಕಥನವನ್ನು ಬರೆದಿಟ್ಟು ಹೋಗಿದ್ದಾನೆ. ಯೂರೋಪಿನ ಪ್ರಾಚೀನಕಾಲದ ಪ್ರವಾಸಿಗಳಲ್ಲಿ ಈತ ಬರೆದ ಕಥನ ಬಹು ಸ್ವಾರಸ್ಯವೂ, ವಿವರಗಳಿಂದ ಕೂಡಿದುದೂ ಆಗಿದೆ. ಎಲ್ಲವನ್ನೂ ಈತ ಸೂಕ್ಷ್ಮವಾಗಿ ಈಕ್ಷಿಸಿ ಬಹು ವಿವರವಾದ ದಾಖಲೆಗಳನ್ನು ಬಿಟ್ಟು ಹೋಗಿದ್ದಾನೆ. ಈತನ ‘ಸೂಮ ಓರಿಯಂಟಲ್’ ಹತ್ತಾರು ಪತ್ರಗಳ ಮೂಲಕ ಬರೆದ ಕಥೆಯಾಗಿದೆ.
ಟೊಮ್ ಪಿರೇಸ ರಾಜಕುಮಾರ ಅಫೊನ್ಸೋ ಬಳಿ ವೈದ್ಯನಾಗಿದ್ದ. ಈತ ಸುಮಾರು ಕ್ರಿ.ಶ. ೧೪೭೮ರಲ್ಲಿ ಹುಟ್ಟಿದ. ಇಂಡಿಯಾಕ್ಕೆ ಬಂದಾಗ ಈತನ ವಯಸ್ಸು ೪೩ ವರ್ಷ, ಕ್ರಿ.ಶ. ೧೫೪೦ರಲ್ಲಿ ತನ್ನ ೭೦ನೇ ವರ್ಷದಲ್ಲಿ ಈತ ವಿಧಿವಶನಾದ. ಗಂದಿಗೆ ವ್ಯಾಪಾರಿಯಾಗಿ ಇಂಡಿಯಾಕ್ಕೆ ಬಂದ, ಕ್ರಿ.ಶ. ೧೫೧೧ರಲ್ಲಿ ಲಿಸ್ಬನ್ನಿಂದ ಹೊರಟ ಹಡಗಿನಲ್ಲಿ ಪಿರೇಸ್ ಕನ್ನಾನೂರಿಗೆ ಸೆಪ್ಟೆಂಬರ್ನಲ್ಲಿ ಬಂದು, ಅಲ್ಲಿ ಗಂದಿಗೆ ವ್ಯಾಪಾರ ಆರಂಭಿಸಿದ. ಕೊಚ್ಚಿ, ಮಲಕ್ಕ ಪ್ರದೇಶಗಳಲ್ಲಿ ಕೆಲಕಾಲ ತಂಗಿದ್ದು, ಮುಂದೆ ರಾಯಭಾರಿಯಾಗಿ ಚೀನಾಕ್ಕೆ ತೆರಳಿದ ಕಾರಣಾಂತರದಿಂದ ಬಂಧಿತನಾಗಿ ಕ್ರಿ.ಶ. ೧೫೪೦ರಲ್ಲಿ ಬಂಧನದಲ್ಲಿದ್ದಾಗಲೇ ವಿಧಿವಶನಾದ.
ಈತ ಇಂಡಿಯಾದ ಕ್ಯಾಂಬೆ, ಮತ್ತು ಮಲಕ್ಕಾದ ವ್ಯಾಪಾರ ವಹಿವಾಟುಗಳ ಬಗೆಗೆ ವಿವರಿಸಿದ್ದಾನೆ. ನಂತರ ತನರೀಸ್ ನಾಡಿನ ದ್ವೀಪದಿಂದ ಆರಂಭಿಸಿ ಮಿರ‌್ಜಾನ್, ಭಟ್ಕಲ್ ಮುಂತಾದ ಸ್ಥಳಗಳ ಬಗೆಗೆ ತಿಳಿಸಿದ್ದಾನೆ.
ಪೀರೆಸ್ ಸಾಯುವಾಗ ಅವನಿಗೆ ಸುಮಾರು ೭೦ ವರ್ಷ ವಯಸ್ಸು. ಈತ ತನ್ನ ಪ್ರವಾಸ ಕಥನವಾದ ‘ಸೂಮ ಓರಿಯಂಟಲ್’ ಅನ್ನು ಬರೆಯಲು ಆರಂಭಿಸಿದ್ದು ಮಲಕ್ಕದಲ್ಲಿದಾಗ; ಮುಗಿಸಿದ್ದು ಅಲ್ಲಿಂದ ಇಂಡಿಯಾಕ್ಕೆ ಬಂದಮೇಲೆ. ಚೀನಾಕ್ಕೆ ಹೋದಾಗಲೂ ಆತನು ಬರೆಯುತ್ತಲೇ ಇದ್ದ. ಆದರೆ ಆ ಉಪಯುಕ್ತ ಗ್ರಂಥ ಈಗ ಇಲ್ಲ.
ಪೀರೆಸನ ‘ಸೂಮ ಓರಿಯಂಟಲ್’ ಸುಮಾರು ನಾಲ್ಕು ಶತಮಾನಗಳ ಕಾಲ ಕಣ್ಮರೆಯಾಗಿದ್ದುದು ಇತ್ತೀಚಿಗೆ ಅಂದರೆ ೧೯೩೭ರಲ್ಲಿ ಬೆಳಕಿಗೆ ಬಂದಿತು. ಇದರಿಂದ ಪೌರ್ವಾತ್ಯ ದೇಶಗಳನ್ನು ಕುರಿತು ಬರೆದ ಗ್ರಂಥ ಗಳಲ್ಲಿ ಅತ್ಯಂತ ಪ್ರಾಚೀನವಾದ ಗ್ರಂಥವೊಂದು ದೊರಕಿದಂತಾಯಿತು. ಈಗ ಇಲ್ಲಿ ಆ ಗ್ರಂಥದಿಂದ ಆಯ್ದು ಕೆಲವು ಮುಖ್ಯ ವಿಷಯಗಳನ್ನು ಮಾತ್ರ ಹೇಳಲಾಗುವುದು.
‘ಮೊದಲ ಇಂಡಿಯಾ’ದ ಕೊನೆಯ ರಾಜ್ಯವನ್ನು ‘ಕನರಿಜ್’ (Canarij- ಕನ್ನಡ) ರಾಜ್ಯ ಎಂದು ಕರೆಯುತ್ತಾರೆ. ಇದಕ್ಕೆ ಒಂದು ಕಡೆ ಗೋವಾ ರಾಜ್ಯ ಹಾಗೂ ಅಂಜ್ ದ್ವೀಪಗಳು ಗಡಿಯಾದರೆ, ಇನ್ನೊಂದು ಕಡೆ ‘ಮಧ್ಯ ಇಂಡಿಯಾ’ ಅಥವಾ ‘ಮಲಬಾರ್ ಇಂಡಿಯಾ’ ಗಡಿಯಾಗಿದೆ. ಒಳನಾಡಿನಲ್ಲಿ ನರಸಿಂಗರಾಜನಿದ್ದಾನೆ. ಈತನ ಭಾಷೆ ‘ಕನರೀಸ್’ (Kanarese). ಇದು ಡೆಕ್ಕನಿನ ಮತ್ತು ಗೋವಾ ರಾಜ್ಯಗಳ ಭಾಷೆಗಳಿಂದ ಭಿನ್ನವಾದುದು. ಸಮುದ್ರತೀರದಲ್ಲಿ ಮತ್ತು ಸಣ್ಣ ಪುಟ್ಟ ಪ್ರದೇಶಗಳಲ್ಲಿ ಎರಡು ರಾಜರುಗಳಿದ್ದಾರೆ. ಇವರೆಲ್ಲಾ ವಿಧರ್ಮಿಗಳು ಹಾಗೂ ನರಸಿಂಗನಿಗೆ ಅಧೀನರು. ಈ ಜನ ನಾಗರೀಕರು, ಯುದ್ಧಾಸಕ್ತರು ಹಾಗೂ ಸಮದ್ರದ ಮೇಲೂ ಭೂಮಿಯ ಮೇಲೂ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುವ ಪ್ರವೀಣರು. ಭೂಮಿ ಸಾಗುವಳಿಯಲ್ಲಿದೆ. ಪ್ರಾಮುಖ್ಯವಾದ ಪಟ್ಟಣಗಳಿವೆ.
ಕನರೀಸ್ ನಾಡಿನಲ್ಲಿ ಅಂಜ್ದ್ವೀಪದಿಂದ ಆರಂಭಿಸಿ ಮಂಗಳೂರುವರೆಗೆ ಸಿಕ್ಕುವ ಬಂದರುಗಳು ಯಾವುದೆಂದರೆ ಮಿರ್ಜಾನ್, ಹೊನ್ನಾವರ, ಭಟ್ಕಲ್, ಬಸ್ರೂರು (Bacalor), ‘ಬೈರವೇರ’ (Bairavera=ಬ್ರಹ್ಮಾವರ?), ಬಾರ್ಕೂರು, ವ್ಡಿಪಿರಂ (Vdipiram=ಉಡುಪಿ ಅಥವಾ ಉದಯಾವರ?) ಮತ್ತು ಮಂಗಳ್ಳೋರ್ (Mangallor=ಮಂಗಳೂರು). ಇವೆಲ್ಲಾ ವ್ಯಾಪಾರದ ಬಂದರುಗಳು. ಹೊನ್ನಾವಾರದಿಂದ ಅಂಜ್ ದ್ವೀಪದವರೆಗಿನ ಪ್ರದೇಶ ಗರ‌್ಸೋಪ್ (ಗೇರುಸೊಪ್ಪೆ) ರಾಜನಿಗೆ ಸೇರಿದ್ದು. ಭಟ್ಕಲ್, ಬಸ್ರೂರು ಮತ್ತು ಇತರ ಒಳನಾಡಿನ ಪಟ್ಟಣಗಳಿಗೇ ಒಬ್ಬ ರಾಜನಿದ್ದಾನೆ. ಉಳಿದ ನಾಲ್ಕು ಬಂದರುಗಳಲ್ಲಿ ಬಂದರಿನ ಮುಖ್ಯಸ್ಥರು (Captains) ಇದ್ದಾರೆ. ಇವರೆಲ್ಲ ನರಸಿಂಗನಿಗೆ ಅಧೀನರಾಗಿದ್ದು ಕಂದಾಯ ಕವಳಿಗೆಗಳನ್ನು ಸಲ್ಲಿಸುತ್ತಿದ್ದಾರೆ.
ಗರ್ಸೋಪಾ ರಾಜ ಗಣ್ಯನಾದ ಮನುಷ್ಯ. ಅವನ ಬಳಿ ಮೂರುಸಾವಿರ ಅಶ್ವಾರೋಹಿಗಳಿದ್ದಾರೆಂದು ಗೊತ್ತಾಗಿದೆ. ಒಳನಾಡಿನಲ್ಲಿ ಒಂದು ಸಣ್ಣದಾದ ಊರಿದೆ. ಅಲ್ಲಿ ತಿಮೋಜ (ತಿಮ್ಮೋಜ) ಇದ್ದಾನೆ. ಗರ್ಸೋಪ ರಾಜನಿಗೆ ಸಂಬಂಧಿಯಾದ ಈತ ಮೊದಲಿಗೆ ಹೊನ್ನಾವರದಲ್ಲಿ ಇರುತ್ತಿದ್ದ. ಈತ ಆಗಾಗ್ಗೆ ನರಸಿಂಗನ ಅಪ್ಪಣೆಯಂತೆ ಆತನ ಆಸ್ಥಾನಕ್ಕೆ ಹೋಗಿಬರುತ್ತಾನೆ. ಈತನನ್ನು ಕಂಡರೆ ನಾವಿಕರಿಗೆ ತುಂಬಾ ಹೆದರಿಕೆ ಇತ್ತು.
ಭಟ್ಕಲ್ ರಾಜ ಕನರೀಸ್ ಭಾಷೆ ಮಾತನಾಡುವ ವಿಧರ್ಮ. ಹೊನ್ನಾವರ ಮತ್ತು ಗರ‌್ಸೋಪ ರಾಜರುಗಳಿಗಿಂತ ದೊಡ್ಡವ. ಈತನ ರಾಜ್ಯ ಒಳನಾಡಿನಲ್ಲಿ ಬಹಳ ದೂರ ಹಬ್ಬಿದೆ. ಗೋವಾ ಮತ್ತು ಚಾಲ್ ಬಿಟ್ಟರೆ ಭಟ್ಕಲ್ ಬಹುಮುಖ್ಯವಾದ ಬಂದರು. ಬಹಳ ವ್ಯಾಪಾರ ನಡೆಯುತ್ತದೆ. ಒಳನಾಡಿನಲ್ಲಿ ಬೆಳೆಯುವ ಅತ್ಯುತ್ತಮವಾದ ‘ಜೀರಸಾಲ್’ (Giracal) ಮತ್ತು ‘ಚಂಬಸಾಲ್’ (Chambacal) ಎಂದು ಕರೆಯಲ್ಪಡುವ ಅಕ್ಕಿ ಇಲ್ಲಿಂದ ರವಾನೆಯಾಗುತ್ತವೆ.
ಬೈರವೇರಾ, ಬಾರ್ಕೂರು, ವ್ಡಿಪಿರಂ ಮತ್ತು ಮಂಗಳೂರು ಬಂದರುಗಳಿಗೆ ಹಡಗುಗಳು ಬರುತ್ತವೆ. ವರ್ತಕರು ಕ್ಯಾಂಬೆ, ಗೋವಾ, ಡೆಕ್ಕನ್ ಮತ್ತು ಓರ್ಮಸ್ಗಳಿಗೆ ಇಲ್ಲಿಂದ ಸರಕುಗಳನ್ನು ರವಾನಿಸುತ್ತಾರೆ. ಮತ್ತು ಆ ಸ್ಥಳಗಳಲ್ಲಿ ಸಿಕ್ಕುವ ಸರಕುಗಳನ್ನು ತರಿಸುತ್ತಾರೆ. ಈ ಬಂದರುಗಳಲ್ಲಿ ಗಣ್ಯರಾದ ಬಂದರು ನಾಯಕರುಗಳು (Captains) ಸೈನ್ಯ ಸಮೇತ ಇದ್ದಾರೆ. ಇವುಗಳಿಂದ ಬರುವ ಆದಾಯ ನರಸಿಂಗನಿಗೆ ಸಲ್ಲುತ್ತದೆ. ಈ ಕನರಾ ನಾಡಿನಿಂದ ನರಸಿಂಗನಿಗೆ ಹೇರಳವಾದ ಆದಾಯವುಂಟು. ಇಡೀ ನಾಡು ಸಾಗುವಳಿಯಲ್ಲಿದೆ. ಎಲೆ ಅಡಿಕೆ ಬೆಳೆ ಇಲ್ಲಿ ಹೆಚ್ಚು. ದೊಡ್ಡ ದೊಡ್ಡ ದೇವಸ್ಥಾನಗಳಿವೆ.
ನರಸಿಂಗರಾಜ ಕನರಾದ ವಿಧರ್ಮ (The king is a heathen of Kanara). ಆ ಕಡೆ ಈತ ಕಳಿಂಗನೂ ಹೌದು (and on the other hand he is a Kling). ಅವನ ಆಸ್ಥಾನದಲ್ಲಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಆದರೆ ರಾಜನ ಮಾತೃಭಾಷೆ (natural speech) ಕನರೀಸ್. ರಾಜನ ಆಸ್ಥಾನದಲ್ಲಿ ಸಾವಿರ ನರ್ತಕಿಯರೂ, ಗಾಯಕಿಯರೂ ಇದ್ದಾರೆ. ಇದೇ ವೃತ್ತಿಯ ನಾಲ್ಕೈದು ಸಾವಿರ ಪುರುಷರೂ ಇದ್ದಾರೆ. ಇವರು ಕಳಿಂಗರು (Klings); ಕನರೀಸ್ ಅಲ್ಲ, ಏಕೆಂದರೆ, ತೆಲಿಂಗನ(Telingana)ದ ಜನರು ಹೆಚ್ಚು ಲಾವಣ್ಯವುಳ್ಳವರು ಹಾಗೂ ನಾನಾ ಆಟಪಾಠಗಳಲ್ಲಿ ಎತ್ತಿದ ಕೈಯ್ಯದವರು.
ಮಂಗಳೂರಿಗೆ ‘ಮೊದಲ ಇಂಡಿಯಾ’ ಕೊನೆಯಾಗಿ, ಅಲ್ಲಿಂದ ‘ಎರಡನೆ ಇಂಡಿಯಾ’ ಅಥವಾ ‘ಮಧ್ಯ ಇಂಡಿಯಾ’ ಆರಂಭವಾಗುತ್ತದೆ. ಇದರ ಆರಂಭ ಮಯ್ಸಿರಂ (ಮಂಜೇಶ್ವರ)ದಿಂದ. ಮಯ್ಸಿರಂ ಮಲಬಾರಿನ ಮೊದಲ ಬಂದರು. ಇಲ್ಲಿ ಆರಂಭವಾದ ಮಧ್ಯ ಇಂಡಿಯಾ ಬೆಂಗಾಳದ ಗಡಿಯಲ್ಲಿರುವ ಗಂಗಾ ನದಿಯಲ್ಲಿ ಕೊನೆಗೊಳ್ಳುತ್ತವೆ. ಮಯ್ಸಿರಂ ಬಂದರು ಬಿಸ್ನಾಗರ (ವಿಜಯನಗರ) ರಾಜನಿಗೆ ಸೇರಿದ್ದು.
ನೇಕಾರ ವರ್ಗಗಳ ಶೈಕ್ಷಣಿಕ ಸ್ಥಿತಿಗತಿ
ಸ್ಥಿತಿಗತಿ
ವಿಜ್ಞಾನ ಬೆಳೆದು ಉದ್ದುದ್ದ ತೋಳುಗಳಿಂದ ಜಗತ್ತನ್ನು ಬಾಚಿ ಬಳಸಿದಾಗ ಕೈಗಾರಿಕೀಕರಣಗೊಂಡ ಭೂಮಿಯ ಮೇಲೆ, ಕಂಡಕಂಡಲ್ಲೆಲ್ಲಾ ದೊಡ್ಡ ದೊಡ್ಡ ಕೈಗಾರಿಕಾ ಘಟಕ(ಫ್ಯಾಕ್ಟರಿ)ಗಳು ಎದ್ದೆದ್ದು ನಿಂತು ದೈತ್ಯ ಕೆಲಸದಲ್ಲಿ ತೊಡಗಿಕೊಂಡಿವೆ. ಇದರಿಂದಾಗಿ ಗುಡಿ-ಕೈಗಾರಿಕೆಗಳು ಮೂಲೆಗೊತ್ತಲ್ಪಟ್ಟು ಮುರುಟಿ ಸುರುಟಿ ಹೋಗಿವೆ. ಹೇಳಲು ಹೆಸರಿಲ್ಲವಾಗಿವೆ. ಅಂತೆಯೇ, ಅವುಗಳಲ್ಲಿ ಹಾಸುಹೊಕ್ಕಾಗಿದ್ದ ಒಗ್ಗಟ್ಟು-ಹೊಂದಾಣಿಕೆ, ಪರಸ್ಪರ ಆದರ-ಗೌರವ, ಸಹಬಾಳ್ವೆ-ಸೌಹಾರ್ದತೆ, ಶಾಂತಿ-ಸಹನೆ, ಸಮಾಧಾನಗಳು ತುಂಬಿದ ಕುಟುಂಬ ಸಂಸ್ಕೃತಿ ಸುಟ್ಟು ಸುಡುಗಾಡು ಸೇರಿವೆ. ಭಾರತದ ಬೆನ್ನೆಲುಬಾಗಿದ್ದ ಹಳ್ಳಿಗಳು ಇನ್ನಿಲ್ಲವಾಗಿವೆ. ಸಸ್ಯ ಸಂಪತ್ತು ಸರ್ವನಾಶಗೊಂಡಿತು. ಜಲತಾಣಗಳು ಒಣಗಿ ಹೋದುವು. ಇರುವುವೂ ಸಹ ಬಡವಾಗಿ ಕೆಟ್ಟುಹೋಗಿವೆ. ಎಲ್ಲೆಲ್ಲಿಯೂ ಎಲ್ಲದರಲ್ಲಿಯೂ ಆಸೆ-ಆಮಿಷ ಅತಿಯಾಗಿ ದುರಾಸೆಯಲ್ಲಿ ಮುಳುಗಿದೆ. ಹಣ-ಅಧಿಕಾರಗಳ ಬೆನ್ನಹತ್ತಿ, ದಾನವ ದಾನವನಾಗಿ ಸುಡುತ್ತಿದೆ.
ಸುಲಲಿತ ವ್ಯವಹಾರ ಜೀವನಕ್ಕಾಗಿ ನಿರ್ಮಾಣವಾದ ಹಣ ಇಂದು ಇಡೀ ಜೀವನವನ್ನೇ ಆಕ್ರಮಿಸಿಕೊಂಡು ಆಮಿಷಗಳ ಆಗರವಾಗಿ ‘‘ಸರ್ವೇಗುಣಾಃ ಕಾಂಚನಮಾಶ್ರಯಂತಿ’’ ಎಂದು ತನ್ನ ದುರಾಡಳಿತದಿಂದ ಲೋಕವನ್ನು ಬಾಧಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಅದರ ಭರಾಟೆ ಮಿತಿಮೀರಿ, ಅರ್ಭಟಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಆರ್ಥಿಕವಾಗಿ ಹಿಂದುಳಿದು, ದಿನನಿತ್ಯದ ಅನ್ನಕ್ಕಾಗಿ ಅಲೆದಾಡುತ್ತಿರುವ ನೇಕಾರ ಶಾಲೆಗೆ ಹೋಗಿ ವಿದ್ಯೆ ಕಲಿಯುವುದಾದರೂ ಹೇಗೆ? ಹಸಿದ ಹೊಟ್ಟೆಯನ್ನು ಮುಂದಿಟ್ಟುಕೊಂಡು ಓದುವುದಾದರೂ ಏನನ್ನು? ಶಿಕ್ಷಣಈ ಕುರಿತು ಶ್ರೀ ಸ್ವಾಮಿ ವಿವೇಕಾನಂದರು-
‘‘Education is the manifastation of perfaction which is already in man’’‘‘ಮಾನವನಲ್ಲಿ ನೆಲೆಸಿರುವ ಪರಿಪೂರ್ಣತೆಯನ್ನು ಪ್ರಕಟಗೊಳಿಸುವುದೇ ಶಿಕ್ಷಣ ಎಂದಿದ್ದಾರೆ’’ಶಾಸ್ತ್ರಗಳಲ್ಲಿ : ಪರಮಾತ್ಮನ ಪರಮಾಣುವಾದ ಪ್ರತಿಯೊಂದು ಜೀವಿಯೂ ಪರಿಪೂರ್ಣತೆಯ ಆಗರವಾಗಿರುವುದು. ಆ ಪರಿಪೂರ್ಣತೆಯು ಮೊದಲಿಗೆ ಗುಪ್ತವಾಗಿ, ಸುಪ್ತವಾಗಿ ಇರುತ್ತದೆ. ಅದನ್ನು ತಿಳಿದುಕೊಳ್ಳಬೇಕು, ತಿಳಿದುಕೊಂಡು ಬೆಳೆಸಿಕೊಳ್ಳಬೇಕು, ಬೆಳೆಸಿ-ಅರಳಿಸಿಕೊಳ್ಳಬೇಕು. ಅರಳಿಸಿಕೊಂಡು ಹಣ್ಣಾಗಿಸಿಕೊಳ್ಳಬೇಕು. ಇದು ಜೀವಿಯ ಜೀವನದ ಗುರಿ.
ಜನ್ಮನಾ ಜಾಯತೇ ಶೂದ್ರಃ ಆಚಾರೇಣ ದ್ವಿಜಃ |
ವೇದಪಾರಾಯಣೇ ವಿಪ್ರಃ ಬ್ರಹ್ಮಜ್ಞಾನೇನ ಬ್ರಾಹ್ಮಣಃ ||
ಮಾನವನಲ್ಲಿ ಪರಿಪೂರ್ಣತೆಯು ಮೊದಲಿಗೆ ನಿದ್ರೆಯಲ್ಲಿರುತ್ತದೆ. ಅದನ್ನು ಗುರುತಿಸಿಕೊಂಡವನಿಗೆ ದ್ವಿಜತ್ವ (ಎರಡನೆಯ ಹುಟ್ಟು) ಉಂಟಾಗುತ್ತದೆ. ಮಲಗಿರುವುದನ್ನು ಎಚ್ಚರಗೊಳಿಸುವ ಕೆಲಸಕ್ಕೆ ಕೈಹಚ್ಚಿದವನಿಗೆ ವಿಪ್ರತ್ವವೊದಗುತ್ತದೆ. ಪೂರ್ಣ ಎಚ್ಚರಗೊಳಿಸಿ ಬಳಸಿಕೊಂಡವನು ಬ್ರಾಹ್ಮಣನಾಗುತ್ತಾನೆ. ಕಲಿಕೆಯ ಅಥವಾ ವಿಕಾಸದ ಮಾರ್ಗವನ್ನು ಕನ್ನಡದ ಕವಿಗಳು ಹೀಗೆ ವಿವರಿಸಿದ್ದಾರೆ-
‘‘ಮನೆಯೇ ಮೊದಲ ಪಾಠಶಾಲೆ ತಾಯಿ ಮೊದಲ ಗುರುವು’’
‘‘ತಂದೆ ಬಾಲ್ಯದೊಳಕ್ಕರ ವಿದ್ಯಗಳನರಿಪದಿರ್ದೊಡೆ ಕೊಂದಮ್ |
ಲಕ್ಕ ಧನಮಿರಲು ಕೆಡುಗುಂ ಚಿಕ್ಕಂದಿನ ವಿದ್ಯೆ ಪೊರೆಗು ಚೂಡಾರತ್ನ ||’’
“ವಿದ್ಯೆ ಕೊಡದಾ ತಂದೆ. ಬುದ್ದಿ ಹೇಳದ ಗುರುವು|
ಬಿದ್ದಿರಲು ಬಂದೆತ್ತದಾ ತಾಯಿ ಧರೆಯೊಳಗೆ |
ಶುದ್ಧ ವೈರಿಗಳು ಸರ್ವಜ್ಞ ||’’
‘‘ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಮಾಲ್ಪವರಿಂದ ಕಂಡು |
ಕೆಲವಂ ಶಾಸ್ತ್ರಂಗಳಿಂ ಓದುತಂ, ಕೆಲವಂ ಸುಜ್ಞಾನದಿಂದ ನೋಡುತಂ ||
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ |
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||’’
ವಿದ್ಯಾ ಸಂಸ್ಥೆಗಳು (ಮಠಗಳು ಸೇರಿದಂತೆ) ೧೨
ಅವುಗಳಲ್ಲಿಯೇ ಶಿಶು ವಿಹಾರಗಳು – ೧೧
ಪೂರ್ವ ಪ್ರಾಥಮಿಕ ಶಾಲೆಗಳು – ೧೧
ಕಿರಿಯ ಪ್ರಾಥಮಿಕ ಶಾಲೆಗಳು – ೧೧,
ಹಿರಿಯ ಪ್ರಾಥಮಿಕ ಶಾಲೆಗಳು – ೬
ಪ್ರೌಢಶಾಲೆಗಳು – ೨
ಸೌಲಭ್ಯಗಳು
ವಿದ್ಯಾರ್ಥಿ ನಿಲಯಗಳು ೮
ಪುರುಷರಿಗೆ ೬, ಮಹಿಳೆಯರಿಗೆ ೨
ಅಕ್ಷರಸ್ಥರು (೧.೫೨) ಅಂದರೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತು ತೇರ್ಗಡೆಯಾದವರು ಪರೀಕ್ಷೆಗೆ ಕುಳಿತವರು ೫,೪೪೫ ಪರೀಕ್ಷೆ ತೇರ್ಗಡೆಯಾದವರು ೨,೯೮೫
ಔದ್ಯೋಗಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು
ವೈದ್ಯಕೀಯ – ೨೫ ವ್ಯವಸಾಯ – ೧
ಕೈಮಗ್ಗ ಮತ್ತು ಜವಳಿ ಇಲಾಕೆಯ ಯೋಜನೆಗಳು
ಕೈಮಗ್ಗ, ವಿದ್ಯುತ್ ಮಗ್ಗ ಹಾಗೂ ಸಿದ್ಧ ಉಡುಪು ವಲಯದ ನೇಕಾರರು : ಕೆಲಸಗಾರರ ಅಭಿವೃದ್ದಿಗಾಗಿ ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.
ರಾಜ್ಯ ವಲಯ ಯೋಜನೆಗಳು
೧. ರಾಷ್ಟ್ರೀಯ ಸಹಕಾರಿ ಅಭಿವೃದ್ದಿ ನಿಗಮ ಯೋಜನೆ
೨. ನಬಾರ್ಡ್ ಯೋಜನೆಯಲ್ಲಿ ದುಡಿಯುವ ಬಂಡವಾಳ ಸಾಲ ಯೋಜನೆ
೩. ಹೊಸ ವಿನ್ಯಾಸ ಮತ್ತು ಪ್ರವೃತ್ತಿ ಯೋಜನೆ
೪. ನೇಕಾರರ ಕಲ್ಯಾಣ ಯೋಜನೆ
ಅ. ಆರೋಗ್ಯ ಯೋಜನೆಗಳು
೧. ಕ್ಯಾನ್ಸರ್ ರೋಗ ಚಿಕಿತ್ಸೆ
೨. ಹೃದ್ರೋಗ ಮತ್ತು ಮೂತ್ರಪಿಂಡ ಜೋಡಣೆ
೩. ಕುಷ್ಠ ರೋಗ ಮತ್ತು ಮಾನಸಿಕ ವಿಕಲತೆ ಅಸಮತೋಲನ
ಆ. ನೇಕಾರರ ಅಂತ್ಯ ಸಂಸ್ಕಾರದ ಖರ್ಚು
ಜಿಲ್ಲಾ ವಲಯ ಯೋಜನೆಯಲ್ಲಿ
೧. ಕೈಮಗ್ಗ ಉದ್ದಿಮೆಗಳಿಗೆ ಸಹಾಯ
೨. ಕೈಮಗ್ಗ ನೇಕಾರಿಕೆ ತರಬೇತಿ
೩. ಸಾಮೂಹಿಕ ನೇಯ್ಗೆ ಕೇಂದ್ರ, ಬಣ್ಣದ ಮನೆ, ವಸತಿ ಕಾಲೋನಿಗಳ ಸ್ಥಾಪನೆ.
೪. ಸುಧಾರಿತ ಮಗ್ಗಗಳು ಮತ್ತು ಉಪಕರಣಗಳ ಪೂರೈಕೆ ಇತ್ಯಾದಿ ಇತ್ಯಾದಿ.
3 ಕೇಂದ್ರ ಪುರಸ್ಕೃತ ದೀನ್ ದಯಾಳ್ ಹತಕರಣಾ ಪ್ರೋಯೋಜನೆ
3 ಕೈಮಗ್ಗ ತರಬೇತಿ ಸಂಸ್ಥೆಗಳು
3 ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ
3 ಕರ್ನಾಟಕ ನೇಕಾರರ ಮುಂದುವರಿದ ಕೈಮಗ್ಗ ತರಬೇತಿ ಸಂಸ್ಥೆ
3 ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳು
ಇತರೆ ಕೈಮಗ್ಗ ನೇಕಾರರ ಯೋಜನೆಗಳು
3 ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ಯೋಜನೆ
3 ನೇಕಾರರು ತಮ್ಮ ಕೈಮಗ್ಗ ಉತ್ಪನ್ನಗಳ ಮಾರಾಟಕ್ಕಾಗಿ ವಿವಿಧ ಮೇಳಗಳಲ್ಲಿ ಭಾಗವಹಿಸುವುದು.
3 ಕೈಮಗ್ಗ ನೇಕಾರರಿಗೆ ಗುರುತಿನ ಚೀಟಿ ವಿತರಣೆ
3 ರಾಷ್ಟ್ರೀಯ ಕೈಮಗ್ಗ ಅಭಿವೃದ್ದಿ ನಿಗಮದ ಮೂಲಕ ಖರೀದಿ ಸೌಲಭ್ಯ.
3 ಕೈಮಗ್ಗ ನೇಕಾರರಿಗೆ ಸಮಗ್ರ ತರಬೇತಿ.
ಕೈಮಗ್ಗ ನೇಕಾರನಿಗೆ ಹೊಸ ಯೋಜನೆಗಳು
3 ಕೈಮಗ್ಗ ನೇಕಾರರ ಆರೋಗ್ಯ ವಿಮಾ ಯೋಜನೆ
3 ಮಹಾತ್ಮಾ ಗಾಂಧಿ ಬುಣಕರ್ ಬಿಮಾ ಯೋಜನೆ
ವಿದ್ಯುತ್ ಮಗ್ಗ ವಲಯದ ಯೋಜನೆಗಳು
3 ವಿದ್ಯುತ್ ಮಗ್ಗ ಘಟಕಗಳು ಹಾಗೂ ಮಗ್ಗ ಪೂರ್ವ ಘಟಕಗಳಿಗೆ ವಿದ್ಯುತ್ ದರದಲ್ಲಿ ರಿಯಾಯಿತಿ ಯೋಜನೆ.
3 ಸ್ವಯಂ ಚಾಲಿತ ಹಾಗೂ ಅರೆ ಸ್ವಯಂ ಚಾಲಿತ ಮಗ್ಗಗಳಿಗೆ ಬಂಡವಾಳ ಹೂಡಿಕೆ
3 ವಿದ್ಯುತ್ ಮಗ್ಗಗಳ ಆಧುನೀಕರಣ ಯೋಜನೆ
3 ವಿದ್ಯುತ್ ಮಗ್ಗ ನೇಕಾರರಿಗೆ ಗುಂಪು ವಿಮಾ ಯೋಜನೆ
ಇನ್ನು ಇತ್ತೀಚಿನ ದಿನಪತ್ರಿಕೆಗಳಲ್ಲಿನ ವಾರ್ತೆಗಳಂತೆ ಸನ್ಮಾನ್ಯ ನಂಜುಂಡಪ್ಪ ವರದಿ ಜಾರಿಯಾಗಿ ಹೊಸ ಬಜೆಟ್ ನಲ್ಲಿ ರೈತರು ಮೀನುಗಾರರ ಜೊತೆ ನೇಕಾರನಿಗೂ ರೂ.೨೫.೦೦೦ದವರೆಗೆ ಸಾಲ ಮನ್ನಾ, ರೂ. ೨೫.೦೦೦ಕ್ಕೆ ಮೀರಿದ ಸಾಲಕ್ಕೆ ಬಡ್ಡಿ ಮನ್ನಾ ಮಾಡಲಾಗಿದೆ. ಅಲ್ಲದೇ, ಮುಂದೆ ಶೇ.೪ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಹೇಳಿದೆ.
ಉಪಸಂಹಾರ
ಒಟ್ಟಿನಲ್ಲಿ ಸರ್ಕಾರಗಳು ನೇಕಾರನಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಆದರೆ ಅವೆಲ್ಲವೂ ರಾವಣನ ಹೊಟ್ಟೆಗೆ ಕಾಸು ಮಜ್ಜಿಗೆಯಂತಾಗಿ ಹೋಗಿದೆ.
ಆಧಾರಗಳು
೧. ಕಾಲೇಲ್ಕರ್ ವರದಿ
೨. ಹಾವನೂರ್ ವರದಿ
೩. ಕೈಮಗ್ಗ ಮತ್ತು ಜವಳಿ ಇಲಾಖೆ ಮಾಹಿತಿಗಳು, ಕರ್ನಾಟಕ ಸರ್ಕಾರ
೪. ಹಿಂದುಳಿದ ವರ್ಗಗಳ ಇಲಾಖೆಯ ಮಾಹಿತಿಗಳು
೫. ಸಂಬಂಧಿಸಿದ ವಿವಿಧ ಸಂಘ-ಸಂಸ್ಥೆಗಳಿಂದ ದೊರೆತ ಮಾಹಿತಿಗಳು
೬. ವಾಣಿಜ್ಯ ಸಂಸ್ಥೆಗಳು – ೩
೭. ಸೇವಾ ಸಂಸ್ಥೆಗಳು – ೧೫೧
ಪಂಪಭಾರತದ ಕೃತ್ಯಾ ಕೀರ್ತಿಗೆ
ಪಂಪಭಾರತದಲ್ಲಿ ಹರಡಿರುವ ಸಾಂಸ್ಕೃತಿಕ ಅಂಶಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿನ ಸಾಂಸ್ಕೃತಿಕ ಅಂಶಗಳಿಗೆ ವಿಶೇಷ ಗಮನವಿತ್ತು. ಅಧ್ಯಯನ ಕೈಕೊಳ್ಳಬೇಕಾದ ಅವಶ್ಯಕತೆ ತುಂಬಾ ಇದೆ. ಅದರಲ್ಲಿನ ಹಲವಾರು ಅಂಶಗಳನ್ನು ಕುರಿತು ವಿದ್ವಾಂಸರು ಆಗೀಗ ಚರ್ಚಿಸುತ್ತ ಬಂದಿದ್ದಾರೆ.
ಮಹಾಕವಿ ಪಂಪ ಮಾಡಿಕೊಂಡ ಬದಲಾವಣೆಗಳು ಕೂಡ ಅಪಾರ. ಅಂಥ ಬದಲಾವಣೆಗಳನ್ನು ಕುರಿತಂತೆಯೂ ತಕ್ಕಷ್ಟು ಚರ್ಚೆ ನಡೆಯುತ್ತ ಬಂದಿದೆ. ವ್ಯಾಸ ಭಾರತದಲ್ಲಿ ಧರ್ಮದೇವತೆಯಾದ ಯಮ ದ್ವೈತವನದಲ್ಲಿದ್ದ ಬ್ರಾಹ್ಮಣನ ಆರಣಿಯನ್ನು ಜಿಂಕೆಯ ರೂಪದಲ್ಲಿ ಬಂದು ಅಪಹರಿಸಿಕೊಂಡು ಹೋಗುತ್ತಾನೆ. ತರುವಾಯದಲ್ಲಿ ಅಟ್ಟಿಸಿಕೊಂಡು ಬಂದ ನಾಲ್ವರು ಪಾಂಡವರನ್ನು ಕೊಳದ ಬಳಿಯಲ್ಲಿ ನಿಶ್ಚೇಷ್ಟಿತಗೊಳಿಸಿ ಕೆಡುವುತ್ತಾನೆ. ಏಕಪಾದದ ಮೇಲೆ ನಿಂತ ಹಂಸರೂಪೀ ಯಕ್ಷನಾಗಿ ಯುಧಿಷ್ಠಿರನಿಂದ ಧಾರ್ಮಿಕಾಧಾತ್ಮಿಕಾದಿ ಸಮಸ್ಯೆಗಳಿಗೆ ಉತ್ತರ ಹೇಳಿಸಿಕೊಂಡು ಸಂಪ್ರೀತನಾಗಿ ಪಾಂಡವರನ್ನು ಬದುಕಿಸುತ್ತಾನೆ.
ಪಂಪಭಾರತದಲ್ಲಿ ಈ ಸನ್ನಿವೇಶ ತೀವ್ರತರವಾಗಿ ಬದಲಾಯಿಸಲ್ಪಟ್ಟಿದೆ. ಅಲ್ಲಿನ ಜಿಂಕೆಯ ಬದಲು ಇಲ್ಲಿ ಮದ್ದಾನೆ ಆರಣಿಯನ್ನು ಅಪಹರಿಸುತ್ತದೆ. ಅಲ್ಲಿನ ಧರ್ಮದೇವತೆ ಯಮ ಇಲ್ಲಿ ಒಂದು ‘ದಿವ್ಯ’ವಾಗಿದೆ. ‘ಅದಱ ಬೆಸಗೊಂಡದರ್ಕೆಲ್ಲಂ ಮಱುಮಾತು ಗುಡುವುದುಂ’ ಎಂದಿಷ್ಟೇ ಹೇಳಿ ಯಕ್ಷಪ್ರಶ್ನೆಯ ಭಾಗವನ್ನು ಸಾರಾಸಗಟಾಗಿ ವರ್ಜಿಸಿಬಿಟ್ಟಿದ್ದಾನೆ ಪಂಪ. ಕನಕ ಎಂಬ ಪುರೋಹಿತ ಎಸಗಿದ ಬೇಳ್ವೆ ಮತ್ತು ಅದರಲ್ಲಿ ಹುಟ್ಟಿದ ಕೀರ್ತಿಕೆಯೆಂಬ ಉಗ್ರದೇವತೆಯ ಪ್ರಸ್ತಾಪ ಮೂಲದಲ್ಲಿಲ್ಲ. ಇಲ್ಲಿನ ಆಭಿಚಾರದ ಕಲ್ಪನೆಯನ್ನು ಪಂಪನೇ ಸೇರಿಸಿದ್ದಾನೆ.[1]
ಕೃತ್ಯಾ (ಅಥವಾ ಕೃತ್ತಿಕಾ) ಎಂಬ ಆಭಿಚಾರಿಣಿ ದೇವತೆಯ ಕಥೆ ವ್ಯಾಸ ಭಾರತದಲ್ಲಿ ಎರಡು ಮೂಡು ಕಡೆ ಬಂದಿದೆ. ಮುಖ್ಯವಾಗಿ ಘೋಷಯಾತ್ರೆಯ ಅವಮಾನದಿಂದ ಬೆಂದ ದುರ್ಯೋಧನ ಪ್ರಾಯೋಪವೇಶಕ್ಕೆ ಸಿದ್ಧನಾದಾಗ ಈ ಕಥೆ ಅಲ್ಲಿ ಬಂದಿದೆ. ಆ ಮಾರ್ಗದಿಂದ ದುರ್ಯೋಧನನನ್ನು ಪರಾಙ್ಮಖಗೊಳಿಸುವುದಕ್ಕಾಗಿ ಅವನ ಪಕ್ಷಪಾತಿಗಳಾದ ರಾಕ್ಷಸರು ಈ ಕೃತ್ಯೆಯನ್ನು ಸೃಷ್ಟಿಸುತ್ತಾರೆ. ಅದರ ವಿವರಗಳನ್ನು ಇಲ್ಲಿ ಅಪ್ರಸ್ತುತ. ಶ್ರೀ.ನ.ಸುಬ್ರಹ್ಮಣ್ಯಂ ಅವರ ಲೇಖನವೊಂದರಲ್ಲಿ (ಪ್ರ.ಕ.೪೪-೪) ಅದರ ಕೆಲವು ವಿವರಗಳನ್ನು ಕಾಣಬಹುದು.
ಪಂಪ ಕೀರ್ತಿಕೆಯ ಸನ್ನಿವೇಶವನ್ನು ಕಲ್ಪಿಸುವಾಗ ಮೇಲೆ ಹೇಳಿದ ಕೃತ್ಯೆಯ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡಿರಬಹುದೆಂಬ ಮಾತನ್ನು ಕೆಲಮಟ್ಟಿಗೆ ಒಪ್ಪಬಹುದು. ಆದರ ಕೃತ್ಯಾ ಎಂಬ ರೂಪವನ್ನು ಬಿಟ್ಟು ಕೀರ್ತಿಗೆ ಎಂಬ ರೂಪವನ್ನೇಕೆ ತಂದುಕೊಂಡ? ಈ ಸಮಸ್ಯೆಗೆ ಸರಿಯಾದ ಉತ್ತರ ಹೇಳಬೇಕಾಗುತ್ತದೆ. ಅದಕ್ಕೆ ಕೃತ್ಯಾ ಎಂಬ ಪೌರಾಣಿಕ ರೂಪವೊಂದೇ ಸಾಕಾಗುವುದಿಲ್ಲ. ಪಂಪ ಸ್ವೇಚ್ಛಾವೃತ್ತಿಯಿಂದ ಈ ರೂಪ ಕಲ್ಪಿಸಿದ್ದಾನೆಂದು ಹೇಳಿ ಆತನಿಗೆ ಹೊಣೆಗೇಡಿತನವನ್ನು ಆರೋಪಿಸಿ ಬಿಡ ಬಹುದು. ಆದರೆ ಹೀಗೆ ಮಾಡುವುದು ಉಚಿತವಲ್ಲವೆಂಬುದು ನಮ್ಮ ಅಭಿಪ್ರಾಯ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡತಿಗ್ರಾಮದ ಶಾಸನವೊಂದು ಈ ನಮ್ಮ ಅಭಿಪ್ರಾಯಕ್ಕೆ ಆಧಾರವಾಗಿದೆ. ಅದರ ಪಾಠ ಕೆಳಗಿನಂತಿದೆ.
ಸ್ವಸ್ತಿ ಶ್ರೀಮತು ಯಾದವ ನಾರಾಯಣಂ ಭುಜಬಳ ಪ್ರೌಢಪ್ರತಾಪ ಚಕ್ರವರ್ತಿ-ಶ್ರೀವೀರ
ರಾಮಚಂದ್ರದೇವನ ವಿಜಯ ರಾಜ್ಯೋದಯದ ೧೨ ಚಿತ್ರಭಾನು ಸಂವತ್ಸರದ ವಯಿಶಾ
ಖ ಬಹುಳ ೨.ಆ. ಪಂಚಮಹಾಸಾಮಂತಂ ವೀರಲಕ್ಷ್ಮೀಕಾಂತಂ ಕೀರ್ತಿಕಾದೇವಿಯ
ಲಬ್ಧವರಪ್ರಸಾದ….ಪಾಸಾದ ಮ್ರಿಗಮದಾಮೋದ ಹಯವತ್ಸರಾ
ಜಂ ಗಣಿಕಾಮನೋಜಂ ರಯ್ಯ ಬಳಸಾಧಕಂ ವರ್ಯ್ಯ ಬಳಜಳಧಿ ಬಡವಾನಳಂ ಕೋಟ
ಕಾಳಾನಳಂ ಕೌತ್ಸವ ವಂಸೋದ್ಭವಂ ಮಾವನಂಕಕಾಱ ವುಭಯಗೋತ್ರ
……ಶ್ರೀಮ…….ಬಯಿರರ್ಸದೇವನ ಬಸವದೇವನ……
…….ಮಂಬನಾಡ ಹಚುಕಾದಿ…..ಆದಿ….ವೆಸನ (SII-IX-i-No-೩೮೧).
ಕ್ರಿ.ಶ. ೧೨೮೨ರ ಮೇಲ್ಕಾಣಿಸಿದ ಶಾಸನದಲ್ಲಿ ಕೌತ್ಸವವಂಶದ ಪಂಚಮಹಾ (ಶಬ್ದ) ಸಾಮಂತನೊಬ್ಬನ ಉಲ್ಲೇಖ ಬಂದಿದೆ. ಈತನ ಹೆಸರು ಬಹುಶಃ ಬಯಿರ ರಸದೇವ. ತನ್ನನ್ನು ಈತ ಕೀರ್ತಿಕಾದೇವಿ ಲಬ್ಧ ವರಪ್ರಸಾದ ಎಂದು ಕರೆದುಕೊಂಡಿದ್ದಾನೆ. ಇದರಿಂದ ಕೀರ್ತಿಕೆ ಎಂಬ ದೇವಿ ಬಳ್ಳಾರಿ ಜಿಲ್ಲೆಯ ಆ ಭಾಗದಲ್ಲಿ ಆ ಕಾಲಕ್ಕೆ ತಕ್ಕಷ್ಟು ಪ್ರಸಿದ್ಧಲಾಗಿದ್ದಳೆಂದು ಖಚಿಪಡುತ್ತದೆ. ಈ ದೇವಿಯ ಉಲ್ಲೇಖ ಇತರತ್ರ ಬಂದಂತಿಲ್ಲ.
ಶಾಸನದ ಕೀರ್ತಿಕಾದೇವಿ ಎಂಬ ರೂಪ ಪಂಪಭಾರತದ ಕೀರ್ತಿಗೆ ಎಂಬುದಕ್ಕೆ ಭಾಷಿಕವಾಗಿ ನೇರ ಸಂಬಂಧ ಪಡೆದಿದೆ. ಪ್ರಾಚೀನ ಜೈನ ಲೇಖಕರು ಹಿಂದೂ ದೇವತೆಗಳನ್ನು ತಮ್ಮ ಉದ್ಧೇಶಕ್ಕೆ ತಕ್ಕಂತೆ ಬದಲಾಯಿಸಿ ತಮ್ಮ ಕೃತಿಗಳಲ್ಲಿ ಸೇರಿಸುವುದು ತೀರ ಸಾಮಾನ್ಯವಾಗಿತ್ತು. ಸೌಮ್ಯರಾದ ಮತ್ತು ಬಹುಜನರ ಗೌರವಕ್ಕೆ ಪಾತ್ರರಾದ ರಾಮನಂಥನವರಿಗೆ ಅವರ ಕೃತಿಗಳಲ್ಲಿ ಉಚ್ಚಸ್ಥಾನ ಪ್ರಾಪ್ತವಾಗಿದ್ದರೆ ಕೃಷ್ಣ ಮತ್ತು ಪರಶುರಾಮನಂಥವರಿಗೆ ಅಂಥ ಸ್ಥಾನ ದೊರಕಿಲ್ಲ. ವಡ್ಡಾರಾಧನೆಯ ಕಾರ್ತಿಕ ಋಷಿಕಥೆಯ ಕಾರ್ತಿಕಋಷಿ ಮುಂಚಿನಿಂದ ಸೊಂಡೂರಿನಲ್ಲಿ ಪ್ರಸಿದ್ಧವಿರುವ ಕುಮಾರಸ್ವಾಮಿಯೇ. ಶಿವಕೋಟಿ ಈ ಕಥೆಯನ್ನು ಬಹು ಜಾಣ್ಮೆಯಿಂದ ಹೆಣದಿದ್ದಾನೆ. ಬ್ರಹ್ಮಶಿವನ ಸಮಯ ಪರೀಕ್ಷೆಯಲ್ಲಿ ಇಂಥ ಬದಲಾವಣೆ ಉದಾಹರಣೆಗಳು ಬೇಕಾದಷ್ಟಿವೆ. ಅವನ ಅಭಿಪ್ರಾಯದಲ್ಲಿ ಶ್ರೀಶೈಲದ ಮಲ್ಲಿಕಾರ್ಜುನ, ಲಕ್ಷ್ಮೇಶ್ವರದ ಸೋಮೇಶ್ವರ, ಕೊಲ್ಲಾಪುರದ ಮಹಾಲಕ್ಷ್ಮೀ ಇವರೆಲ್ಲ ಜೈನ ಪರರೇ. ಕೆಲವೊಂದು ಪ್ರಾಚೀನ ಹಿಂದೂ ಪರಂಪರೆಯ ದೇವರುಗಳನ್ನು ಅವರು ಛೇಡಿಸಿದ್ದೂ ಉಂಟು. ನಯಸೇನ ತನ್ನ ಧರ್ಮಾಮೃತದಲ್ಲಿ ಕಂಚಿಯ ಕಾಮಕೋಟಿ, ಕೊಳ್ಳಿ ಪಾಕೆಯ ಭೂತಕೋಟಿ ಇವರನ್ನು ಜೋಡೆಯರೆಂದು ಕರೆದುಬಿಟ್ಟಿದ್ದಾನೆ. ಅಂದು ಬಹುಜನಪ್ರಿಯನಾಗಿದ್ದ ಮೈಲಾರದೇವರನ್ನು ಬ್ರಹ್ಮಶಿವ ‘ಜೈನನೇ ಕೆಟ್ಟು ಮೈಲಾರ ನಾದ’ ಎಂದು ಹೇಳಿಕೊಂಡಿದ್ದಾನೆ. ಇಂಥ ಭಾವನೆಗಳು (ಕರ್ನಾಟಕದ) ಜೈನ ಲೇಖಕರಲ್ಲಿ ಸರ್ವೇಸಾಧಾರಣವಾಗಿದ್ದವೆಂದು ಈ ಉದಾಹರಣೆ ತೋರಿಸಿಕೊಡುತ್ತವೆ. ಕಾರಣ ಒಂದು ಭಾಗದಲ್ಲಿ ಅಂದು ತಕ್ಕಷ್ಟು ಪ್ರಸಿದ್ಧಳಾಗಿದ್ದ ಕೀರ್ತಿಕೆಯನ್ನು ಆಭಿಚಾರದ ದೇವತೆಯಾಗಿ ಪಂಪ ಹೊಂದಿಸಿಕೊಂಡಿದ್ದರೆ ಅದಕ್ಕೆ ಆಶ್ಚರ್ಯಪಡಬೇಕಾಗಿಲ್ಲ. ಕಾರಣ ಕೀರ್ತಿಗೆಯ ಸೃಷ್ಟಿಗೆ ಪ್ರಸ್ತುತ ಕಡತಿಶಾಸನೋಕ್ತ ಕೀರ್ತಿಕಾ ದೇವಿಯೂ ಮುಖ್ಯ ಪ್ರೇರಣೆ ನೀಡಿರುವ ಸಾಧ್ಯ ತುಂಬಾ ಇದೆ.
ಹೀಗಾಗಿ ಶ್ರೀ ನ.ಸುಬ್ರಹ್ಮಣ್ಯ ಮತ್ತು ಡಾ.ಡಿ.ಎಲ್.ಎನ್. (ಪಂಪ ಭಾರತ ದೀಪಿಕೆ) ಕೃತ್ಯಾ ಅಥವಾ ಕೃತ್ತಿಕಾ ರೂಪದಿಂದ ಕೀರ್ತಿಗೆ ಎಂಬ ರೂಪ ನಿಷ್ಪನ್ನಗೊಳಿಸಿರುವುದು ನಿದಾಧಾರ ಸಮೀಕರಣವಾಗುತ್ತದೆ. ಕೃತ್ಯಾ ರೂಪ ದಲ್ಲಿನ ಮೊದಲ ಸ್ವರ ಹ್ರಸ್ವವಾಗಿದೆ. ಅದರ ಮುಂದೆ (ವಿಜಾತೀಯ) ದ್ವಿತ್ವಾಕ್ಷರ ಬಂದಿದೆ. ಕೀರ್ತಿಕೆ ಎಂಬುದರಲ್ಲಿ ಮೊದಲ ಸ್ವರ ದೀರ್ಘವಿದ್ದು ತರುವಾಯ ದ್ವಿತ್ವ ಬಂದಿದೆ. ತದ್ಭವೀಕರಣದಲ್ಲಿ ಇಂಥ ಧ್ವನಿ ವ್ಯತ್ಯಾಸ ಅಸಾಧ್ಯ. ಸಂಸ್ಕೃತದಿಂದ ಬರುವ ವಿಜಾತಿ ದ್ವಿತ್ವಗಳು ಕನ್ನಡದಲ್ಲಿ ಸರಳಗೊಂಡು ದ್ವಿತ್ವ ಲೋಪವೋ ಸಜಾತೀಯ ದ್ವಿತ್ವಗಳೋ ಆಗಿ ಪರಿವರ್ತಿಸುತ್ತವೆ. ಅವುಗಳ ಹಿಂದಿನ ಸ್ವರ ದೀಘವಾಗಿದ್ದರೆ ಅದು ಹ್ರಸ್ವವಾಗಿ ಮಾರ್ಪಡುತ್ತದೆ. ಅಥವಾ ದ್ವಿತ್ವವೇ ಲೋಪಗೊಳ್ಳುತ್ತದೆ. ಅಂದರೆ ದೀರ್ಘಸ್ವರ ಮತ್ತು ಅದರ ಪರದಲ್ಲಿನ ದ್ವಿತ್ವ ಇವುಗಳಲ್ಲಿ ಯಾವುದಾದರೂ ಒಂದು ಮಾತ್ರ ಉಳಿದುಕೊಳ್ಳುತ್ತದೆ. ಆದ್ದರಿಂದ ಕೃತ್ಯಾ > ಕೀರ್ತಿಗೆಯಾಗಿ ಮಾರ್ಪಟ್ಟಿದೆ ಎಂದು ಭಾಷಾವೈಜ್ಞಾನಿಕವಾಗಿ ಸಾಧಿಸಿ ತೋರಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ನಿಷ್ಪತ್ತಿಯನ್ನು ತ್ಯಜಿಸಬೇಕಾಗುತ್ತದೆ. ಎಂದರೆ ಕಡತಿಶಾಸನೋಕ್ತ ಕೀರ್ತಿಕೆ ಮತ್ತು ಪಂಪಭಾರತದ ಕೀರ್ತಿಗೆಯರು ನೇರ ಸಂಬಂಧ ಪಡೆದಿದ್ದಾರೆಂಬ ಅಂಶ ಹೆಚ್ಚು ಸಮರ್ಥನೀಯವೆನಿಸುತ್ತದೆ.