ವಾದಗ್ರಸ್ತವಾಗದಂತೆ ಚಿಂತಿಸುವುದಿರಲಿ ಸಾಯುವುದೂ ಈ ಕಾಲದಲ್ಲಿ ಸಾಧ್ಯವಿಲ್ಲ ವೆನ್ನುವುದಕ್ಕೆ ಶ್ರೀ ವಿನೋಬಾ ಭಾವೆ ನಿದರ್ಶನ. ಸರ್ವಹಿತ ದೃಷ್ಟಿಯಿಂದ ಚಿಂತಿಸುವುದು ಮತ್ತು ವರ್ತಿಸುವುದು ಸಾಧ್ಯವಾಗಬೇಕೆಂಬ ಹಠ ವಿನೋಬಾರದು. ಆದರೆ, ಉಳುವವನಿಗಾಗಿ ಭೂಮಿಯನ್ನು ದಾನವಾಗಿ ಪಡೆಯಲೆಂದು ದಾಪುಕಾಲು ಹಾಕುತ್ತ ದೇಶಾದ್ಯಂತ ಸಂಚರಿಸಿದ ವಿನೋಬಾರನ್ನು ಧಾರ್ಮಿಕ ಗುಂಗಿನಲ್ಲಿ ಕ್ರಾಂತಿಯ ಕೆಚ್ಚನ್ನು ಮೆದುಗೊಳಿಸಿದ ಪ್ರತಿಗಾಮಿಯೆಂದು ಕಮ್ಯುನಿಸ್ಟರು ದೂರಿದರು. ತುರ್ತು ಪರಿಸ್ಥಿತಿಯನ್ನು ‘ಅನುಶಾಸನ ಪರ್ವ’ವೆಂದು ಹರಸಿದ ಪವನಾರಿನ ಯೋಗಿ ನಮ್ಮಂಥವರಿಗೆ ‘ಸರ್ಕಾರಿ ಸಂತ’ರಂತೆ ಕಂಡರು. ಸವರ್ಣೀಯರು ಇಕ್ಕುವ ಬೆಂಕಿಯಲ್ಲಿ ಹರಿಜನರು ಬೇಯುವಾಗ ಗೋರಕ್ಷಣೆಗಾಗಿ ಅಮರಣಾಂತ ಉಪವಾಸ ಮಾಡಬೇಕೆಂದಿದ್ದ ಇವರ ಹಠಮಾರಿತನ ಅರೆಹುಚ್ಚಿನಂತೆ ತೋರಿತು.
ಭೂದಾನ ಯಜ್ಞ ಘೋಷಿತ ಉದ್ದೇಶದ ದೃಷ್ಟಿಯಿಂದ ಅಯಶಸ್ವಿಯಾಯಿತು, ನಿಜ. ಆದರೆ ಸರ್ಕಾರ ನೇಮಿಸಿದ ಲ್ಯಾಂಡ್ ಟ್ರಿಬ್ಯೂನಲ್ಗಳಿಗೆ ಹಂಚಲು ಭೂಮಿ ಸಿಗದಿದ್ದಾಗ, ವಿನೋಬಾರಿಗೆ ಪಾಳುಭೂಮಿಯಾದರೂ ಅಷ್ಟಿಷ್ಟು ಸಿಕ್ಕಿತೆನ್ನಬಹುದು. ತುರ್ತುಪರಿಸ್ಥಿತಿಯನ್ನು ಅನುಶಾಸನ ಪರ್ವವೆಂದು ಕರೆದಿದ್ದ ವಿನೋಬಾರೇ ತಮ್ಮ ಆಶ್ರಯದಲ್ಲಿ ‘ಆಚಾರ್ಯಕುಲ’ವನ್ನು ಸೇರಿಸಿ ಇನ್ನು ತುರ್ತುಪರಿಸ್ಥಿತಿ ಮುಗಿಯಬೇಕು ಎಂಬ ಸರ್ವಾನುಮತದ ನಿರ್ಣಯಕ್ಕೆ ಕಾರಣರಾದರು. ಅವರು ಕಿವುಡಾದದ್ದು ಹರಿಜನರನ್ನು ದೇವಾಲಯ ಪ್ರವೇಶಕ್ಕೆ ಕರೆದೊಯ್ಯುವಾಗ ಕಪಾಳಕ್ಕೆ ಬಿದ್ದ ಏಟಿನಿಂದ.
ವಕ್ರೋಕ್ತಿ ಸಂತನಿಗೆ ಪ್ರಿಯವಾದೀತೆಂದು ನಾವು ಊಹಿಸುವುದಿಲ್ಲ. ವಾರಣಾಸಿಯಲ್ಲಿ ವಿನೋಬಾ ಸಂಸ್ಕೃತ ಕಲಿಯುತ್ತಿದ್ದ ಪ್ರಾಯಕಾಲದಲ್ಲಿ ಕಾಳಿದಾಸನ ‘ಶಾಕುಂತಲ’ದ ಬಗ್ಗೆ ಅವರ ಅಭಿಪ್ರಾಯವೇನೆಂದು ಯಾರೋ ಕೇಳಿದಾಗ ವಿನೋಬಾ ಕುಪಿತರಾಗಿ ತಾನು ದೇವಭಾಷೆಯನ್ನು ಕಲಿತದ್ದು ರಮ್ಯಕೃತಿಗಳನ್ನು ಓದಲೆಂದು ಅಲ್ಲಾ ಎಂದಿದ್ದರಂತೆ. ಆದರೆ ಎಲ್ಲದರಲ್ಲೂ ಋಜುವಾದ್ದನ್ನು ಅರಸುತ್ತಿದ್ದ ಇವರಿಗೆ ಮಾತಿನ ಚಮತ್ಕಾರದಲ್ಲಿ ಖುಷಿಯಿತ್ತೆಂಬುದು ಸೋಜಿಗ. ಅಮೆರಿಕಾದಲ್ಲಿ ಪ್ರಾಧ್ಯಾಪಕರಾಗಿರುವ ನನ್ನ ಗೆಳೆಯ ಮಾರ್ಟಿನ್ ಗ್ರೀನರು ಗಾಂಧಿ ತತ್ವದಿಂದ ಆಕರ್ಷಿತರಾಗಿ ಭಾರತಕ್ಕೆ ಬಂದು ಕ್ಷೇತ್ರಸನ್ಯಾಸ ಸ್ವೀಕರಿಸಿದ್ದ ವಿನೋಬಾರನ್ನು ಪವನಾರ್ ಆಶ್ರಮದಲ್ಲಿ ಸಂಧಿಸಿದರು. ಮಂಚದ ಮೇಲೆ ಮಲಗಿದ್ದ ವಿನೋಬಾರಿಗೆ ತನ್ನ ವೈಯಕ್ತಿಕ ಸಮಸ್ಯೆಗಳನ್ನು ಕಾಗದದ ಮೇಲೆ ಬರೆದು ತೋರಿಸಿದರು. ಕಿವಿ ಕೇಳಿಸದ ವಿನೋಬಾ ಅದನ್ನು ಕಣ್ಣಿನ ಹತ್ತಿರ ಹಿಡಿದು ಓದಿ ಈ ಮಾತುಗಳನ್ನು ದೇವನಾಗರಿ ಅಕ್ಷರದಲ್ಲಿ ನೋಟ್ ಬುಕ್ ಮೇಲೆ ಬರೆದುಕೊಟ್ಟರು : “ಓಂ ಹರಿ | ನೋ ಹರಿ| ನೋ ವರಿ.” ತನ್ನ ಅನುಮಾನಗಳನ್ನು ಬಿಟ್ಟು ಕೊಡದಂತೆ ಗೌರವದಿಂದ, ಆದರೆ ಮುಜುಗರ ಪಡುತ್ತ, ನಿಂತ ಪಾಶ್ಚಾತ್ಯನೊಬ್ಬನಿಗೆ ಈ ಮಾತಿನ ಚಮತ್ಕಾರದ ಹಿಂದಿದ್ದ ಆಂಗ್ಲ ಸಂಸ್ಕೃಗಳ ಬೆರಕೆಯಲ್ಲಿದ್ದ ಜಾಣಹಾಸ್ಯ ಪರಿಸ್ಥಿತಿಗೆ ಸಮಂಜಸವೆನ್ನಿಸಿತು. ವಿನೋಬಾರಿಂದ ಸಿಡಿದು ಬೇರೆಯಾಗಿದ್ದ ಜಯಪ್ರಕಾಶರು ತುರ್ತುಪರಿಸ್ಥಿತಿ ಮುಗಿದ ಮೇಲೆ ತನ್ನ ಮಾರ್ಗದಲ್ಲಿ ಪವನಾರಿನಲ್ಲಿ ಇಳಿದು ವಿನೋಬಾರನ್ನು ಸಂಧಿಸಿದಾಗ ”ಬಾಬಾನೂ ಜಯಪ್ರಕಾಶರ ದಾರಿಯಲ್ಲಿದ್ದಾನೆ” ಎಂದು ದ್ವಂದ್ವಾರ್ಥದ ಮಾತನ್ನು ಆಡಿದ್ದರೆಂದು ಸರ್ವೋದಯದ ಗೆಳೆಯರೊಬ್ಬರು ನನಗೆ ಹೇಳಿದರು. ಆಗ ವಿನೋಬಾ ಗೋಹತ್ಯದ ವಿರೋಧವಾಗಿ ಸಾತ್ವಿಕ ಸತ್ಯಾಗ್ರಹ ಯೋಚನೆಯಲ್ಲಿದ್ದರು.
ವಿನೋಬಾ ಗಾಂಧೀಜಿಯವರ ಅಣಕವೆ? ಹಾಗೆನ್ನುವವರು ಇದ್ದಾರೆ. ನಾಯಪಾಲ್ ಅಂಥವರಲ್ಲಿ ಒಬ್ಬರು. ಗಾಂಧಿಯನ್ನು ವಿನೋಬಾ, ತಮ್ಮ ಕ್ರಿಯೆಯಲ್ಲೂ ಚಿಂತನೆಯಲ್ಲೂ ಅತಿಗೆ ಕೊಂಡೊಯ್ದರು. ಹಲವು ಮಕ್ಕಳಾದ ಮೇಲೆ ತಮ್ಮ ಕಾಮುಕತೆಯ ವಿರುದ್ಧ ಹೋರಾಡುತ್ತ ಗಾಂಧೀಜಿ ಬ್ರಹ್ಮಚರ್ಯ ವ್ರತ ಹಿಡಿದರು. ವಿನೋಬಾ ಬಾಲ್ಯದಿಂದಲೇ ಬ್ರಹ್ಮಚಾರಿ: ‘ಶಾಕುಂತಲ’ ವನ್ನು ನಿಕೃಷ್ಟವಾಗಿ ಕಂಡ ಬ್ರಹ್ಮಚಾರಿ. ಗಾಂಧೀಜಿ ದಂಡಿಯ ಉಪ್ಪಿನ ಸತ್ಯಾಗ್ರಹದ ಮತ್ತು ನವಾಖಲಿಯ ಹತ್ಯಾಖಾಂಡದ ಸಂದರ್ಭದಲ್ಲಿ ನಡೆದರೆ ವಿನೋಬಾ ದೇಶಾದ್ಯಂತ ವರ್ಷಗಟ್ಟಲೆ ನಡೆದರು. ಗಾಂಧೀಜಿ ಆಗೀಗ ಮೌನ ಆಚರಿಸಿದರೆ ವಿನೋಬಾ ವರ್ಷಗಟ್ಟಲೆ ಮೌನ ಆಚರಿಸಿದರು. ಗಾಂಧೀಜಿ ತನ್ನ ದೇಶದ ಸರ್ಕಾರದ ಕಪಟ ನೀತಿ ಮತ್ತು ಮತೀಯ ಹಿಂಸೆಯ ಬಗ್ಗೆ ತಮ್ಮ ಕೊನೆಯ ಉಪವಾಸ ಮಾಡಿದರೆ ವಿನೋಬಾ ಗೋಹತ್ಯೆಯ ವಿರುದ್ಧ ಉಪವಾಸ ಮಾಡುವ ಸಂಕಲ್ಪ ಕೈಗೊಂಡಿದ್ದರು. ಭಾರತದ ಒಳಗಿನ ಹೊಲಸು ಮತ್ತು ರಾಜಕೀಯ ದಾಸ್ಯ – ಈ ಎರಡನ್ನೂ ತೊಡೆದು ಹಾಕಲೆಂದು ತನ್ನನ್ನು ತೊಡಗಿಸಿಕೊಂಡು, ಈ ತೊಡಗುವಿಕೆಯ ಸಂದರ್ಭದಲ್ಲೇ ತನ್ನನ್ನು ಶೋಧಿಸಿಕೊಳ್ಳುತ್ತಾ ರಾಜಕೀಯವನ್ನೂ ಧರ್ಮವನ್ನೂ ಬೆಸೆಯಲು ಗಾಂಧೀಜಿ ಹೆಣಗಿದರು. ತನ್ನನ್ನು ನೋಡಲು ಬರುತ್ತಿದ್ದ ಆಡಳಿತ ಪಕ್ಷದ ರಾಜಕಾರಣಿಗಳ ಕಪಟವನ್ನು ಕಾಣಲಾರದಷ್ಟು ವಿನೋಬಾ ಪೂರ್ಣ ಶುದ್ಧಿಯ ಹುಡುಕಾಟದಲ್ಲಿ ಮಂಕಾದರು. ಕಾಮ, ಹಿಂಸೆ, ಸಂಬಂಧದ ಬಿಕ್ಕಟ್ಟುಗಳು, ಕ್ರೌರ್ಯ- ಇತ್ಯಾದಿಯಾಗಿ ಸಾಂಸಾರಿಕನಾದವನು ಅನುಭವಿಸುವ, ಇತರರಲ್ಲಿ ತಾನು ದ್ವೇಷಿಸುವಂಥದೂ ತನ್ನ ಸಾಧ್ಯತೆಯೆಂದೂ ಗುರುತಿಸಿಕೊಳ್ಳುವ, ಈ ನಮ್ಮ ಮೋಹದ ಪ್ರಪಂಚದ ಹಂಗಿಲ್ಲದಂತೆ ಬದುಕುವಾತ ಅರಿಯಬಲ್ಲ ಸತ್ಯಗಳು ಕೇವಲ ಅಮೂರ್ತವಾಗುತ್ತವೆಯೇ? ಕಾವಿಲ್ಲದೆ ಸತ್ವಹೀನವಾಗುತ್ತವೆಯೆ? ಇಂಥ ಪ್ರಶ್ನೆಗಳು ವಿನೋಬಾರ ಸೋಲಿನಲ್ಲೂ ಗೆಲುವಿನಲ್ಲೂ ನಮಗೆ ಎದುರಾಗುತ್ತವೆ.
ಇಷ್ಟಿದ್ದೂ ಗಾಂಧೀಯುಗದ ಈ ಕೊನೆಯ ದೊಡ್ಡ ಮನುಷ್ಯನಿಗೆ ಕೆಲವು ಸ್ಪಷ್ಟ ಕಲ್ಪನೆಗಳಿದ್ದವು. ಸಾಕಷ್ಟು ನಿದ್ದೆಯಿಲ್ಲದಂತೆ ದೇಶದ ರಗಳೆ ಹಚ್ಚಿಕೊಂಡಿದ್ದ ಪಂಡಿತ ಜವಹರಲಾಲರು ಅಧಿಕಾರವನ್ನು ಯಾಕೆ ವಿಕೇಂದ್ರಿಕರಿಸಬೇಕು ಎನ್ನುವುದಕ್ಕೆ ವಿನೋಬಾ ಕೊಟ್ಟ ಉಪಮೆ ಸ್ವಾರಸ್ಯಕರವಾಗಿದೆ. ಭಗವಾನ್ ವಿಷ್ಣು ಇಡೀ ವಿಶ್ವದ ಪಾಲಕನಾಗಿದ್ದೂ ಲಕ್ಷ್ಮಿಯ ಜೊತೆ ಶೇಷಶಾಯಿಯಾಗಿ ನಿಶ್ಚಿಂತೆಯಿಂದ ಪವಡಿಸಿಲ್ಲವೆ? ಇದಕ್ಕೆ ಕಾರಣ? ಜಗತ್ತಿನ ಜೀವಿಗಳೆಲ್ಲರಿಗೂ ಅವರವರ ಕರ್ಮದ ಫಲವನ್ನು ಅನುಭವಿಸುತ್ತಾರೆ ಎಂದು ವಿಷ್ಣು ತನ್ನ ಅಧಿಕಾರವನ್ನು ವಿಕೇಂದ್ರಿಕರಿಸಿದ್ದರಿಂದ.
ವಿನೋಬಾ ಗಾಂಧಿಯುಗದ ಕೊನೆಯ ಅನಾರ್ಕಿಸ್ಟರು; ಮನುಷ್ಯ ತನ್ನ ಒಳ್ಳೆಯತನದ ಸಹಜ ವಿಕಾಸದಿಂದ ಸರ್ಕಾರದ ಪ್ರಭುತ್ವವನ್ನು ಕ್ರಮೇಣ ಅನವಶ್ಯಕಗೊಳಿಸುತ್ತಾನೆಂದು ತಿಳಿದಿದ್ದ ಆದರ್ಶವಾದಿಗಳು. ಈ ಆದರ್ಶದ ಸಾಧನೆಗಾಗಿ ಗ್ರಾಮರಾಜ್ಯದ ಕಲ್ಪನೆಗೆ ರೂಪ ಕೊಟ್ಟವರು. ಅದಕ್ಕೆ ಭಾರತ ಹಿಡಿದಿರುವ ದಿಕ್ಕೇ ಪಾಶ್ಚಾತ್ಯ ಮಾದರಿಯ ಆಧುನಿಕತೆಯಾದ್ದರಿಂದ ವಿನೋಬಾರ ಕನಸುಗಾರಿಕೆ ನಮಗೆ ಕಿಂಚಿತ್ತೂ ಕ್ರಿಯಾಶೀಲವೆಂದು ಅನ್ನಿಸಲಿಲ್ಲ. ಅವರ ವಿಷ್ಣು ಸಹಸ್ರನಾಮದ ಪಠನ ಅವರ ‘ಜೈಜಗತ್’ ಘೋಷ, ಅವರ ಮೌನ, ಮನುಷ್ಯ ಸ್ವಭಾವದ ಅರಿವಿಲ್ಲದ ಅವರ ನಿಷ್ಠುರ ವ್ರತಾಚರಣೆ – ಈ ಎಲ್ಲವೂ ನಂಬಿದವರಿಗೆ ಹಿತವೆನ್ನಿಸುವ, ನಂಬದವರಿಗೆ ಅಸಂಬದ್ಧವೆನ್ನಿಸುವ ವ್ಯಕ್ತಿಗತ ಮಾಂತ್ರಿಕತೆಯಾಗಿಬಿಟ್ಟಿತ್ತು. ಕೇವಲ ತಂತ್ರವನ್ನು ಕಲಿತುಕೊಂಡು, ಆದರೆ ಮಂತ್ರವನ್ನು ಮರೆತು ಆಡಿಸಿದ ಮಂತ್ರದಂಡದಂತೆ ಕಂಡಿತು. ಗಾಂಧೀವಾದಕ್ಕೆ ಕ್ರಿಯಾಶೀಲತೆಯ ಹಲ್ಲು ಉಗುರುಗಳನ್ನು ಕೊಡಲು ಇನ್ನಿಬ್ಬರು ಶ್ರಮಿಸಿದರು – ಜಯಪ್ರಕಾಶ್ ಮತ್ತು ಲೋಹಿಯಾ. ಜಯಪ್ರಕಾಶರ ಆಂದೋಳನ ಬರಡು ನೈತಿಕತೆಯ ಅಹಂಕಾರದ, ಸ್ವಪ್ರತಿಷ್ಠೆಯ ಮೊರಾರ‍್ಜಿಯವರನ್ನು ಅಧಿಕಾರಕ್ಕೆ ತಂದಿತು. ಲೋಹಿಯಾವಾದ ಸ್ವಪ್ರದರ್ಶನ ರತಿಯ ಹುಂಬರನ್ನು ಬೆಳೆಸಿತು. ಗಾಂಧೀಜಿ, ಜಯಪ್ರಕಾಶ್, ಲೋಹಿಯಾ – ಇವರು ನಿರೀಕ್ಷಿಸದೇ ಇದ್ದ ಅಣಕಗಳು ಇವು ಎಂದು ಹೇಳಿಬಿಡುವುದು ಸುಲಭ. ಈ ದೊಡ್ಡವರ ಚಿಂತನಾಕ್ರಮ ಮತ್ತು ಕಾರ್ಯವಿಧಾನಗಳಲ್ಲೆ ಈ ಅಣುಕು ಸಾಧ್ಯತೆ ಅಡಗಿದೆಯೆ, ಅದನ್ನು ನಿವಾರಿಸುವುದು ಸಾಧ್ಯವೇ- ಈ ವಿಮರ್ಶೆಯ ಎಚ್ಚರದಲ್ಲಿ ಕಂಗೆಟ್ಟ ನಮ್ಮ ಕಾಲಕ್ಕೆ ಗಾಂಧಿಯ ಅನ್ವಯದ ಸಾಧ್ಯತೆಯನ್ನು ಹುಡುಕಿಕೊಳ್ಳಬೇಕಾಗಿದೆ.
ಕನ್ನಡ ಮತ್ತು ವಿಕೇಂದ್ರೀಕರಣ
ನಾನು ತುಂಬ ಸಂತೋಷದಲ್ಲಿ ಮಾತನಾಡಲು ನಿಂತಿದ್ದೇನೆ. ಕೇವಲ ದಾಕ್ಷಿಣ್ಯದ ಮಾತಲ್ಲ ಇದು. ಹಲವು ಕಾರಣಗಳಿಂದ ನನಗೆ ತುಂಬ ಆನಂದವಾಗಿದೆ. ಕನ್ನಡ ಸಾರಸ್ವತ ಲೋಕದ ಪ್ರತಿನಿಧಿಯಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ದೊರೆಯಬಹುದಾದ ಅತ್ಯಂತ ದೊಡ್ಡ ಮರ್ಯಾದೆ ನನಗೆ ಇವತು ಸಿಕ್ಕಿದೆ. ಅದೂ ನಾನು ತುಂಬ ಗೌರವಿಸುವ ಇನ್ನಿತರ ನಾಲ್ಕೂ ಜನ ಸಾಹಿತಿಗಳ ಜೊತೆಗೆ ಸಿಕ್ಕಿದೆ. ಈ ನಾಲ್ವರ ಸಹವಾಸದಿಂದಾಗಿ ನನಗೆ ಸಿಕ್ಕಿದ ಮರ್ಯಾದೆಗೆ ಬೆಲೆ ಹೆಚ್ಚಿದ! ಈ ಮರ್ಯಾದೆ ದೊರೆತ ಸಮಯವೂ ಎಂಥದು?ಡಾ. ಶಿವರುದ್ರಪ್ಪನವರಂತಹ ಹಿರಿಯ ಸಾಹಿತಿಯೊಬ್ಬರು ಅಕಾಡೆಮಿಯ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಮೂರು ದಶಕಗಳಿಗೂ ಹಿಂದೆ ನನ್ನ ಎಳೆಹರಯದ ವಿದ್ಯಾರ್ಥಿ ದೆಸೆಯಲ್ಲಿ ನಾನು ಬರೆದೊಂದು ಕಿರುಕಥೆಯನ್ನು ಅವರು ಮೆಚ್ಚಿ ಆಡಿದ್ದರು. ಮಹಾರಾಜರ ಕಾಲೇಜಿನ ಕ್ಯಾಂಟೀನ್ನಲ್ಲಿ ನಾನು ಕೂತಿದ್ದಲ್ಲಿಗೆ ಬಂದು ಈ ಹಿರಿಯರು ಒಳ್ಳಯ ಮಾತಾಡಿದ್ದರು. ಇವತ್ತು ಅವರ ಅಧ್ಯಕ್ಷತೆಯಲ್ಲಿ ನನಗೆ ಈ ಪ್ರಶಸ್ಸತಿ ದೊರಕಿದೆ ಎಂಬುದು ಹಳೆಯ ಕಾಲವನ್ನೆಲ್ಲ ನೆನಪಿಗೆ ತರುತ್ತದೆ. ಇವತ್ತಿನ ಈ ಘಟನೆಗೆ ಇನ್ನೂ ಒಂದು ಹೆಚ್ಚಳವಿದೆ. ಅದೆಂದರೆ ನಮ್ಮ ನಾಡಿನ ಅತ್ಯಂತ ದೊಡ್ಡ ಕವಿಗಳಲ್ಲಿ ಒಬ್ಬರಾದ ಶ್ರೀ ಕೆಎಸ್.ನರಸಿಂಹಸ್ವಾಮಿಗಳ ಘನ ಅಧ್ಯಕ್ಷತೆಯಲ್ಲಿ ಈ ಪದವಿ ನಮಗೆಲ್ಲ ದೊರೆಯುತ್ತಿದೆ.
ಸದಾ ಚೈತನ್ಯಶೀಲರಾದ ಗೆಳೆಯ ಶಾಂತಿನಾಥ ದೇಸಾಯಿ, ಗೆಳೆಯ ತೇಜಸ್ವಿ, ಶ್ರೀಮತಿ ಶಾಂತಾದೇವಿ ಕಣವಿ. ಡಾ.ಕುಶಾಲಪ್ಪ ಗೌಡರ ಬಗ್ಗೆ ನಾನು ಈಗ ಹೇಳುವುದು ನಿಜವಲ್ಲದಿರಬಹುದು. ಆದರೆ ನನ್ನ ಬಗ್ಗೆಯಂತೂ ಇದು ನಿಜ: ನಾನು ಸೃಜನಶೀಲನಾಗಿ ಎಷ್ಟು ಹಿಗ್ಗುವುಇದೆಯೋ ಅಷ್ಟೇ ಕುಗ್ಗಿರುವುದೂ ಇದೆ. ಹಲವು ಸಾರಿ ನಾನು ಇನ್ನೇನು ಮುಂದೆ ಬರೆಯಲಾರೆ ಎನ್ನಿಸಿದ್ದಿದೆ. ಅಂತ ಸಂದರ್ಭಗಳಲ್ಲಿ ಈ ಬಗೆಯ ಪ್ರಶಸ್ತಿಗಳು ತರುವ ಕೀರ್ತಿ ಲೇಖಕನಿಗೆ ಮತ್ತೆ ತನ್ನಲ್ಲಿ ನಂಬಿಕೆ ಹುಟ್ಟಿಸುವಂತಿರುತ್ತದೆ. ಧೈರ್ಯ ಕೊಡುವಂತಿರುತ್ತದೆ. ನೈಜ ಸ್ವಧರ್ಮವೇನೆಂಬುದನ್ನು ನೆನಪು ಮಾಡಿಕೊಡುತ್ತದೆ. ಇಗೋ ನೀನು ಕುಲಪತಿಯಾಗಿರುವುದಾಗಲೀ ಪ್ರಾಧ್ಯಾಪಕನಾಗಿರುವುದಾಗಲೇ ಸಾಮಾಜಿಕ ಸ್ಥಾನಮಾನಗಳನ್ನು ಪಡೆದು ಎತ್ತರದಲ್ಲಿರುವುದಾಗಲಿ ಅಪ್ರಸ್ತುತಃ ಆದರೆ ನೀನು ನಿಜವಾಗಿ ಏನೆಂದರೆ ಲೇಖಕ-ಕನ್ನಡಕ್ಕೆ ಬೇಕಾದ ಲೇಖಕ-ಎಂಬ ಎಚ್ಚರಿಕೆಯನ್ನು ಕೊಡುತ್ತದೆ. ಯಾರೋ ಮೊನ್ನೆ ನನ್ನ ಕೇಳಿದರು. ಕೇರಳದಲ್ಲಿ ಯೂನಿವರ್ಸಿಟಿ ಆಡಳಿತ ನಡೆಸುವುದು ಕಷ್ಟವೆನ್ನಿಸುವುದಿಲ್ಲವೇ ಎಂದು. ನಾನು ಹೇಳಿದೆ: ಇಲ್ಲ ಇವತ್ತಿಗೂ ನನನಗೆ ಒಂದು ಒಳ್ಳೆಯ ಕಥೆ ಬರೆಯುವುದೆ ಹೆಚ್ಚು ಕಷ್ಟದ ವಿಷಯವನ್ನಿಸುತ್ತದೆ ಎಂದು. ಇವತ್ತಿನ ಪ್ರಶಸ್ತಿ ನನಗೆ ನನ್ನ ಜೀವನದಲಿ ಯಾವುದು ಮಹತ್ವದ್ದಾಗಿ ಉಳಿದಿರಬೇಕೆಂಬ ಎಚ್ಚರಿಕೆ ಕೊಡುತ್ತಿದೆ. ಅದಕ್ಕಾಗಿ ಎಲ್ಲರಿಗೂ ನಾನು ಕೃತಜ್ಞ.
ಕನ್ನಡದಲ್ಲಿ ಬರೆಯುವ ನಮಗೆಲ್ಲರಿಗೂ ಇರಬೇಕಾದ ಎಚ್ಚರವೆಂದರೆ ಜ್ಞಾನದ ಕ್ಷೇತ್ರದಲ್ಲಿ ಸಂಸ್ಕೃತ ಆಳುತ್ತಿದ್ದಾಗ, ಇವತ್ತು ಎಲ್ಲ ಕ್ಷೇತ್ರಗಳಲ್ಲೂ ಇಂಗ್ಲಿಷ್ ಆಳುತ್ತಿರುವಾಗ ಕನ್ನಡ ಧೀಮಂತರಿಗೆ ಕನ್ನಡದಲ್ಲಿ ಕನ್ನಡದಲ್ಲಿ ಬರೆಯುವುದು ಸಾಧ್ಯವಾದ್ದು, ಬರೆಯುವುದು ಅಗತ್ಯವೆನ್ನಿಸಿದ್ದು ಕನ್ನಡದಂಥ ಭಾಷೆಗಳೆಲ್ಲದರ ಬಗ್ಗೆ ಇದು ನಿಜ ನಿರಕ್ಷಕರರು ಉಳಿಸಿಕೊಂಡು ಬಂದ ಭಾಷೆ ಭಾರತೀಯ ಭಾಷೆಗಳು ಎನ್ನುವುದು. ಇವರು ನಿರಕ್ಷಕರಾದರೂ ಅಸಂಸ್ಕೃತರಲ್ಲ. ವಿಪರ‍್ಯಾಸವೆಂದರೆ ಇಂದು ಒಬ್ಬ ಭಾರತೀಯ ಯಾವ ಪ್ರಾದೇಶಿಕ ಭಾಷೆಯನ್ನೂ ಅರಿಯದೆ ಕೇವಲ ಇಂಗ್ಲಿಷ್ ಆಡಿಕೊಂಡು ಬೆಳೆದವನಾದರೆ ಅವನು ಅಸಂಸ್ಕೃತನಾಗಿರುತ್ತಾನೆಂಬುದು. ಅಂತೂ ಅವನಿಗೆ ತನ್ನ ನೆಲದ ಸಂವೇದನೆಯಿಂದ ಬರುವ ನೈ ಸಂಸ್ಕೃತಿಯಿರುವುದಿಲ್ಲ. ಇವತ್ತು ಇಂಗ್ಲಿಷಲ್ಲಿ ಬರೆಯುತ್ತಿರುವ ಅತ್ಯತ್ತಮ ಭಾರತೀಯ ಲೇಖಕರೆಲ್ಲರೂ ರಾಜಾರಾಯರಿರಲಿ, ಮುಲ್ಕ್ರಾಜ್ ಆನಂದ್ ಇರಲಿ, ನಾರಾಯಣ್ ಇರಲಿ ತಮ್ಮ ತಮ್ಮ ಮಾತೃಭಾಷೆಗಳಲ್ಲಿ ತಮ್ಮ ಬಾಲ್ಯ ಕಾಲವನ್ನಾದರೂ ಕಳೆದವರು
ಈಗ ನಮಗೆ ಎದರುರಾಗುತ್ತಿರುವ ಟೆಕ್ನಾಲಜಿ ಯುಗದಲ್ಲಿ ಕನ್ನಡ ತನ್ನ ಪ್ರಾಮುಖ್ಯತೆಯನ್ನುಳಿಸಿಕೊಂಡೆ ಇರುತ್ತದೆಯೆ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತಿದೆ. ಗಾಂಧೀಜಿ ಬಯಸಿದ್ದ ರಾಷ್ಟ್ರ ಕಲ್ಪನೆಯಲ್ಲಿ ಸರ್ವೋದಯದ ರಾಷ್ಟ್ರ ಕಲ್ಪನೆಯಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಮುಕ್ತ ಬೆಳವಣಿಗೆಯ ಅವಕಾಶವಿದೆ. ಆದರೆ ನಾವು ಇಂದು ನಮ್ಮ ವಿದ್ಯಾಭ್ಯಾಸ ಕ್ರಮದಲ್ಲೂ ನಮ್ಮ ಒಟ್ಟು ಆಶಯಗಳಲ್ಲೂ ಆಯ್ದುಕೊಂಡಿರುವ ಆಧುನಿಕ ನಾಗರಿಕತೆಗೆ ಪ್ರಾದೇಶಿಕ ಭಾಷೆಗಳು ತೊಡಕಾಗಿ ಕಾಣುತ್ತವೆ.
ಸಂಪದಭಿವೃದ್ಧಿಯ ಪ್ರಾಪಂಚಿಕ ದೃಷ್ಟಿಯಿಂದ ನಾವೆಲ್ಲರೂ ಹೆಚ್ಚು ಹೆಚ್ಚು ಕೇಂದ್ರೀಕರಣ ಬಯಸುತ್ತೇವೆ; ಆದರೆ ಆತ್ಮದ ಬೆಳವಣಿಗೆಯ ದೃಷ್ಟಿಯಿಂದ ಸೌಂದರ್ಯದ ದೃಷ್ಟಿಯಿಂದ, ರಸದ ದೃಷ್ಟಿಯಿಂದ ಹೆಚ್ಚು ಹೆಚ್ಚು ವಿಕೇಂದ್ರಿಕರಣ ಬಯಸುತ್ತೇವೆ. ಸರ್ವೋದಯಕ್ಕೆ ವಿಕೇಂದ್ರಕರಣ ಬೇಕು: ಕನ್ನಡ, ತುಳು, ಕೊಡವ, ತಮಿಳು, ಮರಾಠಿ, ಉರ್ದು ಎಲ್ಲ ಬೇಕು. ವ್ಯವಸ್ಥೆ ಎಷ್ಟು ಚಿಕ್ಕದಾದಷ್ಟು ಅಷ್ಟು ವ್ಯಕ್ತಿ ಸರ್ವಾಂಗ ಅರಳಿಯಾನೆಂಬ ದೃಷ್ಟಿ ಉದು. ಸೌಂದರ್ಯದ ಸೃಷ್ಟಿಗೆ ಅಗತ್ಯವಾದ ಸಾವಯವ ಸಂಬಂಧ ಕೌಟುಂಬಿಕ ಪ್ರಜ್ಞೆಯಿದೆ. ಈ ಕುಟುಂಬ ಭಾವನೆಯಲ್ಲಿ ಪಶುಪಕ್ಷಿ ಮರಗಿಡಗಳು, ವಿಶ್ವದ ಜಡ ಚೈತನ್ಯರಾಶಿಯೆಲ್ಲವೂ ಸೇರಿಕೊಳ್ಳುತ್ತದೆ. ಆಧುನಿಕ ಯುಗದ ಇನ್ನೊಂದು ಬಗೆಯ ತುಡಿತದಲ್ಲಿ ವ್ಯವಸ್ಥೆ ಹೆಚ್ಚು ಹೆಚ್ಚು ಜಟಿಲವೂ ಆಗಾಧವೂ ಬೃಹದಾಕಾರವೂ ಆಗಿರಬೇಕಾಗುತ್ತದೆ. ನ್ಯೂಯಾರ್ಕಿನ ಜೊತೆ ಮೈಸೂರು ದಿನನಿತ್ಯದ ವ್ಯವಹಾರ ಪಡೆದಿರಬೇಕೆಂಬ ಹಂಬಲದ ಈ ವ್ಯವಸ್ಥೆಯ ಕೇಂದ್ರೀಕೃತ ಕಾರ್ಯ ವಿಧಾನದಲ್ಲಿ ಇಂಗ್ಲಿಷ್ ಮಾತ್ರ ಸಾಕು. ಕನ್ನಡ, ತುಳು, ತೆಲುಗುಗಳ ತೊಡಕು, ಈ ಭಾಷೆಗಳು ಉಳಿಯುವುದಾದರೆ ಹಿತ್ತಲಲ್ಲೋ ಅಡಿಗೆ ಮನೆಯಲ್ಲೋ ಅವು ಉಳಿದರೆ ಸಾಕು. ಟೆಲಿಫೋನ್ ಸಂಪರ್ಕದ ನಡುಮನೆಗೆ ಕನ್ನಡ ಬೇಡ. ಜೆಟ್ ಪ್ರಯಾಣತಕ್ಕದು ಬೇಡ. ಇಂಥ ಕೇಂದ್ರಿಕೃತ ವ್ಯವಸ್ಥೆಗೆ ಜೀವಾಳವಾದ ವಿದ್ಯಾಭ್ಯಾಸ ಕ್ರಮ ಸರ್ವೋದಯವನ್ನು ಬಯಸವುಂಥದಲ್ಲ;
ಜಟಿಲವಾದದ್ದನ್ನು ನಿರ್ವಹಿಸಬಲ್ಲ ಎಲೀಟಿಸ್ಟ್ ಮಾದರಿಯದು. ಬುದ್ಧಿ ಬಲದ ಈ ಉಚ್ಛತೆ ಖಂಡಿತ ನಾವು ಬಯಸಬೇಕಾದ ಜ್ಞಾನದ ಶ್ರೇಷ್ಠತೆಯಲ್ಲ. ಅನುಭವದ ಸಮಗ್ರತೆಗೆ ಇದರಲ್ಲಿ ಬೆಲೆಯಿಲ್ಲ.
ಇಂಥ ನಾಗರೀಕತೆಯನ್ನು ಬಯಸುವ ನಮ್ಮ ಪರಿಸರದಲ್ಲಿ ಕನ್ನಡ ಎಷ್ಟು ಕಾಲ ಕೇವಲ ಸಾಹಿತ್ಯದ ಭಾಷೆಯಾಗಿ ಉಳಿದೀತು? ಬಾಲ್ಯದಲ್ಲಾದರೂ ಕನ್ನಡದ ಮುಖೇನ ಮಕ್ಕಳ ಬುದ್ಧಿ ಬೆಳೆಯದಿದ್ದಲ್ಲಿ ಅವರು ಕನ್ನಡ ಓದುವರಾಗಿ ಉಳಿದಾರೆ? ಜನಜೀವನದಲ್ಲಿ ಸಮೃದ್ಧವಾಗದ ಭಾಷೆಯಲ್ಲ ಕಾಳಿದಾಸ, ಶೇಕ್ಸ್ಪಿಯರ್, ಟಾಲ್ಸ್ಟಾಯ್ ಹುಟ್ಟುತ್ತಿರುವುದು ಸಾಧ್ಯವೇ? ಸರ್ವೋದಯ ಬಯಸುವಾತನ ಶ್ರೇಷ್ಟತೆಯ ಕಲ್ಪನೆ ಬೇರೆಯಾಗಿರುತ್ತದೆ. ಬುದ್ಧಿದರ್ಪದ ರಾಕ್ಷಸರಿಗೆ ಅದರಲ್ಲಿ ಜಾಗವಿಲ್ಲ. ವ್ಯಕ್ತಿತ್ ಸಮಗ್ರವಾಗಿ ನಿಸರ್ಗಕ್ಕೆ ಹೊಂದಿಕೊಂಡಂತೆ ಬೆಳೆಯಬೇಕೆಂದು ಅದು ಅಪೇಕ್ಷಿಸುತ್ತದೆ. ಅಂಥ ದೃಷ್ಟಿಗೆ ಬಹು ಭಾಷೆಗಳ ಭಾರತ ತೊಡಕಾಗಿ ಕಾಣಿಸುವುದರ ಬದಲಾಗಿ ಸರಸ್ವತಿಯ ವರವಾಗಿ ಕಾಣಿಸುತ್ತದೆ.
ಕನ್ನಡ ಸಂಸ್ಕೃತಿಯನ್ನು ಪ್ರೀತಿಸುವ ನಾವೆಲ್ಲರೂ ಇಂದು ಕಾಲದ ಪ್ರವಾಹಕ್ಕೆ ಎದುರಾಗಿ ಈಜಬೇಕಾಗಿದೆ. ಆಧುನಿಕ ಯುಗದ ಐರೋಪ್ಯ ಕೇಂದ್ರಿತ ದೃಷ್ಟಿಯಿಂದ ಬಿಡುಗಡೆ ಹೊಂದಿ, ಕನ್ನಡವನ್ನು ನಮ್ಮ ಬೆಚ್ಚನೆಯ ಗೂಡಾಗಿ ಮಾಡಿಕೊಂಡು ಮುಂದಿನ ಒಳ್ಳೆಯದಕ್ಕಾಗಿ ಕಾದು ಕೂರಬೇಕಾಗಿದೆ. ಕಾಲದ ಒಟ್ಟು ಈ ನಿರ್ಲಕ್ಷ್ಯದಲ್ಲಿ ಇಂಥ ಸಾಹಿತ್ಯದ ಪ್ರಶಸ್ತಿಗಳು ನಮಗೆ ನಾವು ಧೈರ್ಯ ತಂದುಕೊಳ್ಳುವ ವಿಧಾನಗಳು ಎನ್ನಬಹುದು.
ನಾವು ಮಾಡಿದ ಕೆಲಸವನ್ನು ಕನ್ನಡ ಜನ ಮೆಚ್ಚಿಕೊಂಡಿದೆ. ಹಾಗೆಂದು ಈ ನಾವು ಐವರಿಗೆ ಅಕಾಡೆಮಿ ಹೇಳುತ್ತಿದೆ. ಇದರಿಂದ ನಮಗೆ ಇನ್ನಷ್ಟು ಕೆಸ ಮಾಡಬೇಕೆಂಬ ಆಸೆ ಧೈರ್ಯ ಹುಟ್ಟಿದೆ. ಇದಕ್ಕಾಗಿ ನಾವು ಕೃತಜ್ಞರು.
ಗ್ರಹಚಾರ
(ಶಿವನ ವೇಷದಲ್ಲಿ ಮಂಜರಿ ಸತ್ತು ಬಿದ್ದಿದ್ದಾಳೆ. ಮಾರ್ಕಂಡೇಯನ ವೇಷದ ಮದನತಿಲಕ ಅಳುತ್ತಿದ್ದಾನೆ.)
ಮದನತಿಲಕ : ಮಂಜರೀ ನನ್ನ ಮಂಜರಿ, ಉಳಿದಿರೋ ಒಬ್ಬಳೇ ಹೆಂಡತಿ ನೀನೂ ಹೋದ ಮೇಲೆ
ಬದುಕೋದಕ್ಕೆ ನನಗೇನೂ ಉಳಿದಿಲ್ಲವಲ್ಲೆ!
ನಿನ್ನ ಹೆಸರೇ ನನ್ನ ಬಾಯಿಗೆ ಎಷ್ಟೊಂದು ರುಚಿಯಾಗಿತ್ತು.
ಕೇಳೋದಕ್ಕೆ ಕಿವಿಗೆ ಹಿತಕರವಾಗಿತ್ತು.
ಕೇಳೋದಕ್ಕೆ ಕಿವಿಗೆ ಹಿತಕರವಾಗಿತ್ತು.
ಇನ್ನು ಯಾರನ್ನ ಆ ರೀತಿ ಕರೆಯಲೆ?
ಆಹಾ ಮಂಜರೀ… ಎಂಥಾ ಭಾಗ್ಯವತಿಯೇ ನೀನು!
ಹುಟ್ಟು ಕಲಾವಿದೆ,
ನಾಟಕ ಆಡ ಆಡುತ್ತಲೇ ವೀರಮರಣ ಪಡೆದೆಯಲ್ಲೆ!
ಹರಹರಾ ಅಂತ ನಿನ್ನ ವೇಷ ಕಟ್ಟಿದವಳನ್ನೇ
ಹರಕೊಂಡು ತಿಂದಿಯಲ್ಲೋ ಶಿವನೇ!
(ಸಹಾನುಭೂತಿ ಸೂಚಿಸಲು ಮದರಂಗಿ ಬಂದು ದೂರ ನಿಲ್ಲುತ್ತಾಲೆ. ಮದನ ತಿಲಕ ಅವಳನ್ನು ನೋಡಿ ಅಳುತ್ತ ಮಾತಾಡುತ್ತಾನೆ.)
ಬಾಮ್ಮಾ ಮದರಂಗಿ, ಸಮಾಧಾನ ಹೇಳಲಿಕ್ಕೆ ಬಂದಿದ್ದೀಯಲ್ಲವೆ?
ನನ್ನನ್ನ ಕಟ್ಟಿಕೊಂಡದ್ದರಿಂದ ಮುತ್ತೈದೆ ಸಾವುಕಂಡಳು ಪುಣ್ಯವಂತಿ!
ಯಾರಿಗುಂಟು ಯಾರಿಗಿಲ್ಲ!
ಹತ್ತಿರ ಬಾಮ್ಮಾ ನೋಡು, ಹ್ಯಾಗೆ ಮಲಗಿದ್ದಾಳೆ ಮಾರಾಯ್ತಿ?
ನೀನಾದರೂ ಈ ಹತಭಾಗ್ಯನ ಹತ್ತಿರ ಬಂದು
ಸಹಾನೂಭೂತಿ ತೋರಿಸಬಾರದೆ? ದುಃಖತಪ್ತವಾದ
ಕಣ್ಣೀರೊರೆಸಿ ನನ್ನ ಮುಖವನ್ನ ನಿನ್ನ ಹೃದಯಸ್ಥಲದಲ್ಲಿಟ್ಟುಕೊಂಡು
ಸಮಾಧಾನ ಹೇಳಿದರೆ ಬೇಡ ಅನ್ನುತ್ತೇನೆಯೇ?
(ಮದರಂಗಿ ಬಂದು ಕೂರುವಳು. ಮಂಜರಿಯ ಭೂತ ಅಂದರೆ ಹೆಣ ಮದರಂಗಿಯನ್ನು ನೋಡಿ ಎದ್ದು ಕೂತು ಮತ್ಸರದಿಂದ ಉರಿದುರಿದು ಸಂಕಟಪಡುತ್ತದೆ. ಭೂತರೂಪದಲ್ಲಿರುವುದರಿಂದ ಇಬ್ಬರಿಗೂ ಅವಳು ಕಾಣಿಸುವುದಿಲ್ಲ. ಸಂಜೀವಶಿವ ಬರುವವರೆಗಿನ ಇವರ ಸಂಭಾಷಣೆ ಶೋಕದ ಧಾಟಿಯಲ್ಲೇ ನಡೆಯುತ್ತದೆ. ಭೂತ ಸಕಾಲಿಕ ಪ್ರತಕ್ರಿಯೆ ವ್ಯಕ್ತಪಡಿಸುತ್ತಲೇ ಇರುತ್ತದೆ.)
ಮದರಂಗಿ : ಅಯ್ಯೋ ಪಾಪ, ಎಂಥಾ ಪುಣ್ಯಾತ್ಗಿತ್ತಿ. ಹೆಂಗ ಸತ್ತಳಲ್ಲ, ದುರ್ದೈವ….
ಮದನತಿಲಕ : ಎಂಥಾ ದುರ್ದೈವ ಅಂತೀಯಮ್ಮ! ಇವಳು ಸತ್ತ ದಿನ ಒಬ್ಬ ಮಂತ್ರಿ
ಸಾಯಲಿಲ್ಲ, ಒಬ್ಬ ಕವಿ ಸಾಯಲಿಲ್ಲ, ಒಬ್ಬ ರಾಜ ಸಾಯಲಿಲ್ಲ…
ಇದಕ್ಕಿಂತ ದುರ್ದೈವ ಬೇಕೆ? ದಿನಾಲು ಕನಸು ಮನಸಿನಲ್ಲಿ ಮದರಂಗಿಯನ್ನೇ
ಕನವರಿಸುತ್ತೀಯಲ್ಲಾ ಅಂತ ಅಸೂಯೆಯಿಂದ ಸತ್ತಳು ಕಣಮ್ಮ.
ಮದರಂಗಿ : ಸುಳ್ಳು.
ಮದನತಿಲಕ : ಹೆಣದ ಮುಂದೆ ಸುಳ್ಳು ಹೇಳ್ತಾರೇನೇ ಯಾರಾದರೂ?
ಮದರಂಗಿ : ಹಾಂಗಿದ್ದರೆ ನನ್ನ ಬಿಟ್ಟು ಅವಳನ್ಯಾಕೆ ಕಟ್ಟಿಕೊಂಡೆ?
ಮದನತಿಲಕ : ನನ್ನನ್ನ ಕಟ್ಟಿಕೊಂಡ ಒಂಭತ್ತನೆಯವಳು ಹೀಗೆ ಸಾಯಬೇಕೆಂತ ಗ್ರಹಚಾರ
ಗ್ರಂಥದಲ್ಲಿತ್ತು ಕಣೇ! ಅದಕ್ಕೇ ಮೊದಲು ಪೀಡೆ ತೊಲಗಲಿ ಅಂತ
ಅವಳನ್ನ ಕಟ್ಟಿಕೊಮಡೆ. ಇಲ್ಲದಿದ್ದಲ್ಲಿ ನೀನೇ ಹೀಗೆ ಸಾಯಬೇಕಾಗಿತ್ತು
ಗೊತ್ತ? (ಈಗ ಭೂತದ ಪ್ರತಿಕ್ರಿಯೆ ತೀವ್ರವಾಗುತ್ತದೆ)
ಮಂಜರಿಯಹೆಣ : ಎಲ ಎಲಾ ಅಯೋಗ್ಯ ನನಮಗನೆ!
ಮದನತಿಲಕ : ನೀನಿನ್ನೂ ನನ್ನ ಮಾತನ್ನ ನಂಬುತ್ತಿಲ್ಲ ಅಲ್ಲವೆ? ಅಯ್ಯೋ
ಶಿವಶಿವಾ ಹೀಗೆ ವಿಶ್ವಾಸಹೀನನಾಗಿ ಬದುಕೋದಕ್ಕಿಂತ
ಸಾಯೋದೇ ಮೇಲಲ್ಲವೆ? ಮಂಜರಿಯ ಬದಲು
ನನಗಾದರೂ ಸಾವನ್ನು ತರಬಾರದಿತ್ತೇ?….
ಮದರಂಗಿ : ನೀನೇನೋ ಸಾಯಬೇಕೆಂತೀ. ಆದರೆ ಸಾವಿನ ತಾಯಿ ಪರವಾನಿಗಿ
ಕೊಡಬೇಕಲ್ಲ ಮುದುಕಾ.
ಮದನತಿಲಕ : ಮೊನ್ನೆ ಕನಸಿನಲ್ಲಿ ಅವಳೂ ಬಂದಿದ್ದಳಮ್ಮ
“ಕೊಂದು ಬಿಡು ತಾಯೀ” ಅಂದೆ
“ಇನ್ನೊಂದು ಹುಡುಗಿಯನ್ನ ಆಳಿ ಬಾ ಮಗನೇ”
ಅಂದಳಲ್ಲಮ್ಮ.
ಮದರಂಗಿ : ಹುಡುಗಿ ಸಿಕ್ಕಬೇಕಲ್ಲೋ ಮುದುಕಾ ನಿನಗೆ.
ಮದನತಿಲಕ : ದೊಡ್ಡ ಮನಸ್ಸು ಮಾಡಿ ನೀ ಸಿಕ್ಕರೂ ಸಾಕಮ್ಮ ನನಗೆ.
ಮದರಂಗಿ : ಮುದುಕಾ ನಾ ಹುಡುಗಿ ಅಲ್ಲ, ನೀ ಹುಡುಗ ಅಲ್ಲ.
ಮದನತಿಲಕ : ನೀನೇ ದೊಡ್ಡಮನಸ್ಸು ಮಾಡಿ ಬಂದರೆ ನಾನು ಹುಡಗನೋ
ಮುದುಕನೋ ಅಂತ ನಿನಗೇ ತಿಳಿಯುತ್ತದೆ. ಇಬ್ಬರೂ ಪ್ರೀತಿಸುತ್ತ
ಇದ್ದರೆ ನನಗೆ ನೀನೇ ನಗೆಮಾರಿ ಪೋರಿ. ನಿನಗೆ ನಾನೇ ಜವಾರಿ ಹೋರಿ!
ಮದರಂಗಿ : ಅವ್ ಶಿವನೇ! ಏನ್ ಚಂದ ಮಾತಾಡತೈತಿದು! (ಸಂಜೀವಶಿವ ಬರುವನು)
ಸಂಜೀವಶಿವ : (ಆಶ್ಚರ್ಯದಿಂದ) ಅಯ್ಯಾ ನೀನಿನ್ನೂ ಜೀವಂತವಾಗಿದ್ದೀಯಾ?
ಮದನತಿಲಕ : ಯಾಕೆ ನಾನು ಸಾಯಬೇಕಿತ್ತ?
ಸಂಜೀವಶಿವ : ನಿನ್ನ ರಾತ್ರಿ ನೀನು ಶಿವನ ವೇಷ ಕಟ್ಟಿರಲಿಲ್ಲವ?
ಮದನತಿಲಕ : ಕಟ್ಟಿದ್ದೆ. (ಮಂಜರಿಯ ಹೆಣ ಎದ್ದು ಬಂದು “ಸುಳ್ಳು ಹೇಳ್ತೀಯಾ ಕಳ್ಳ ನನ ಮಗನೇ”
ಎಂದು ಮದನತಿಲಕನ ಕೆನ್ನೆಗೆ ತಿವಿಯುತ್ತದೆ.)
ಮದನತಿಲಕ : ಇಲ್ಲಿಲ್ಲ. ನಾನಲ್ಲ ಶಿವನ ವೇಷ ಕಟ್ಟಿದ್ದು, ಮಂಜರಿ.
(ಈಗ ಮಂಜರಿಯ ಭೂತ ಹೋಗಿ ಮತ್ತೆ ಹೆಣವಾಗುವುದು.)
ಸಂಜೀವಶಿವ : ಕೊನೇ ಕ್ಷಣದಲ್ಲಿ ಬದಲಿಸಿದೆಯಾ?
ಮದನತಿಲಕ : ಹೌದು.
ಸಂಜೀವಶಿವ : ಯಾಕೆ?
ಮದನತಿಲಕ : ಮಂಜರಿ ಹಟ ಹಿಡಿದಳು ಸ್ವಾಮಿ. ಶಿವನ ವೇಷ ಕಟ್ಟಿದರೇ ನಾನು
ಬದುಕೋದು, ಇಲ್ಲದಿದ್ದರೆ ಕೆರೆಯೋ ಬಾವಿಯೋ ಬೀಳ್ತೀನಿ ಅಂತ
ಹೆದರಿಸಿದಳು ಮಾರಾಯಾ.
(ಮಂಜರಿಯ ಹೆಣ ಇವನು ಸೃಷ್ಟಿಸುತ್ತಿರುವ ಸುಳ್ಳು ಕೇಳಿ ಬೆರಗಾಗಿ “ಅಬ್ಬಾ”
ಎಂದು ಬಾಯಿ ಮುಚ್ಚಿಕೊಳ್ಳುವುದು.)
“ಲೇ ಮಂಜರಿ ನಿನಗೆ ಶಿವನ ಸಂಭಾಷಣೆ ಮತ್ತು ಹಾಡು ಬರೋದಿಲ್ಲ.
ಹಟ ಹಿಡೀಬೇಡವೇ” ಅಂದೆ. ಏನೆಂದರೂ ಕೇಳಲಿಲ್ಲ.
ಕೊನೆಗೆ ವೇಷ ಬದಲಿಸಿ ಮಂಜರಿಗೆ ಶಿವನ ವೇಷ ಕಟ್ಟಿ ನಾನು
ಮಾರ್ಕಂಡೇಯನಾದೆ. ಮುಂದೆ ಶಿವ ಸತ್ತುಬಿದ್ದಾಗ “ಓಹೋ!” ಅಂದೆ.
ಇಷ್ಟೆ ಸ್ವಾಮಿ ನಡೆದದ್ದು.
ಮಂಜರಿಯ ಹೆಣ : (ಎದ್ದು ಬಂದು) ಎಲಾ ಕಳ್ಳ! ನೋಡಿದಿರಾ ಸಮಯಕ್ಕೆ ಸರಿಯಾಗಿ ಹ್ಯಾಗೆ ಗಾಳ ಹಾಕಿ ತಗೀತಾನೆ ಸುಳ್ಳುಗಳನ್ನ! ಲೋ ಅಡ್ಡ ಹುಟ್ಟಿದವನೆ ಸುಳ್ಳು ಬೊಗಳ್ತೀಯಾ? ಇಷ್ಟೆ ಸ್ವಾಮಿ ನಡೆದದ್ದು; ಇವನು ಶಿವ ನಾನು ಮಾರ್ಕಂಡೇಯನಾಗಿ ಇನ್ನೇನು ಆಟ ಸುರುವಾಗಬೇಕು; ಅಷ್ಟರಲ್ಲಿ ಯಾವಳೋ ಒಬ್ಬ ಸೇಡುಮಾರಿ ಬಂದಳು. ಅವಳ ಮುಖ ಕತ್ತಲೆಗಿಂತ ಕಪ್ಪಗಿತ್ತು, ಕುಡುಗೋಲಿನಂಥ ಕೋರೆ ಹಲ್ಲಿತ್ತು. ಕೊಂಬೂ ಇದ್ದಂಗಿತ್ತು. ನೆತ್ತರುಗಣ್ಣು ಕಿಸಿದು ಕೆಂಚು ಮೀಸೆ ಕೆದರಿ, ಮೃಗದ ನೆಗೆತ ನೆಗೆಯುತ್ತ ಬಂದಳು. “ಶಿವ ನೀನೇ ಏನಯ್ಯಾ?” ಅಂದಳು. ಅಷ್ಟಕ್ಕೇ ಈ ಶಿವನ ಒಳಚಡ್ಡಿ ಒದ್ದೆಯಾಯ್ತು ನೋಡಿ. ಇವನು ಹೆದರುತ್ತ “ದೇವೀ ನೀನ್ಯಾರು, ಎಲ್ಲಿಯವಳು ತಿಳಿಯಲಿಲ್ಲ” ಅಂದ. ಅದಕ್ಕವಳು “ಯಾಕೆ ಹಳೇ ದೋಸ್ತಿ ಮರೆತೆಯೇನಯ್ಯಾ? ಇವತ್ತು ಇಬ್ಬರೂ ಮಾಯೀಬೆಟ್ಟಕ್ಕೆ ಹೋಗೋದಲ್ಲವ? ನಿನ್ನವ್ವ ಕರೀತಿದಾಳೆ ಕಣೋ” ಅಂತಂದು ಗುಡ್ಡದಷ್ಟು ದೊಡ್ಡ ನಗೆ ನಕ್ಕು ಮಾಯವಾದಳು ನೋಡಿ. ಇವನು ಗಡಗಡ ನಡುಗುತ್ತ ನನ್ನ ಕೈಕಾಲುಕಟ್ಟಿಕೊಂಡು “ಅವಳ್ಯಾವಳೋ ಹಳೇ ಮಾರಿ ಕಣೇ ಆಟ ಕೆಡಿಸಿ ಬಿಡ್ತಾಳೆ. ವೇಷ ಬದಲಿಸೋಣ” ಅಂತ ಅಂಗಲಾಚಿದ. ನನಗೆ ಶಿವನ ಹಾಡು, ಮಾತು ಬರೋದಿಲ್ಲವೆಂದರೂ ಕೇಳಲಿಲ್ಲ. ನಾನೇ ಎಲ್ಲಾ ನೋಡಿಕೊಳ್ತೀನಿ ಅಂತ ಹೇಳಿ ಮಾತಾಡಲಿಕ್ಕೆ ನನಗೆ ಅವಕಾಶ ಕೊಡದೆ ಸಮಯವಾಯಿತೆಂದು ಅವಸರ ಮಾಡಿ ವೇಷಗಳನ್ನ ಅದಲಿಬದಲಿ ಮಾಡಿಯೇಬಿಟ್ಟ. ನಾನೂ ಒಪ್ಪಿಕೊಂಡು ಶಿವನ ವೇಷ ಕಟ್ಟಿದೆ. ನಾನು ಮಾಡಿದ ತಪ್ಪು ಆಮೇಲೆ ತಿಳಿಯಿತು. ಒಂದು ಧಡೂತಿ ರಾಕ್ಷಸಿ ದೂರದಲ್ಲಿ ಕುಂತಿತ್ತು. “ಸಾಯ್ ಶಿವನೇ” ಅಂತಂದು ಕೋಲು ಬೀಸಿ ನನ್ನ ಕಡೆ ಬಿಸಾಕಿದ್ದೇ, ಅದು ತಾಗಿ ಸತ್ತೇ ಬಿದ್ದೆ! (ಮದನತಿಲಕನನ್ನು ಒದೆಯುತ್ತ) ನನ್ನ ಕರ್ಮ; ಈ ಅಯೋಗ್ಯನಿಗಾಗಿ ನಾನು ಸಾಯಬೇಕಾಯ್ತು. ಸುಮ್ಮನೇ ಮಾರ್ಕಂಡೇಯನ ವೇಷದಲ್ಲಿ ಇದ್ದಿದ್ದರೆ ಜೀವಂತವಾಗಿದ್ದು ಈ ಮದರಂಗಿಯನ್ನು ಒಂದು ಕೈ ನೋಡಬಹುದಿತ್ತೆ!
ಸಂಜೀವಶಿವ : ಅಂದರೆ ನೀನು ಕಟ್ಟಬೇಕಾಗಿದ್ದ ವೇಷ ಅವಳು ಕಟ್ಟಿ ನಿನಗೆ ಬರಬೇಕಾದ ಸಾವನ್ನ ತಾನು ತಗೊಂಡ್ಲು ಅಂತಲ?
ಮಂಜರಿಯಹೆಣ : ಹಾಗೆ ಹೇಳಿ ಈ ಅಯೋಗ್ಯನಿಗೆ.
ಮದನತಿಲಕ : ಹಾಗಲ್ಲ ಅವಳ ಸಾವು ಹೀಗಾಗಬೇಕೆಂದು ಗ್ರಹಚಾರ ಗ್ರಂಥದಲ್ಲಿತ್ತಪ್ಪ.
ಮಂಜರಿಯ ಹೆಣ : ಮತ್ತೆ ಸುಳ್ಳು(ಒದೆಯುವಳು)
ಸಂಜೀವಶಿವ : ಈಕೆ ಯಾರು?
ಮದನತಿಲಕ : ಮದರಂಗಿ. ಸಹಾನುಭೂತಿ ಸೂಚಿಸಲಿಕ್ಕೆ ಬಂದಿದ್ದಾಲೆ. ಪಾಪ. ಅಂದರೆ ಮಂಜರಿ ಸತ್ತುದರಿಂದ ನನಗೆ ದುಃಖ ಆಗಿಲ್ಲ ಅಂತ ತಿಳಿಯಬೇಡ. ನೀನು ಬರುವ ಮುನ್ನಬಿದ್ದು ಬಿದ್ದು ಅತ್ತೆ. ಬಿಕ್ಕಳಿಸಿ ಅತ್ತೆ ದಿಂಡುರುಳಿ ಅತ್ತೆ. ಹಾಡಿಕೊಂಡತ್ತೆ. ಅಲ್ಲವೇನೆ ಮದರಂಗಿ?
ಮಂಜರಿಯಹೆಣ : ಮತ್ತೆ ಸುಳ್ಳು.
ಮದನತಿಲಕ : ಯಾಕಯ್ಯ ಒದೀತಿ? ಮಾತಿನಲ್ಲಿ ನಂಬಿಕೆ ಬರಲಿಲ್ಲವ?
ಸಂಜೀವಶಿವ : ನಾನು ಒದೀಲಿಲ್ಲ ಕಣ್ಣಪ್ಪ, ನಿನ್ನ ಗ್ರಹಚಾರ ಒದೆಯುತ್ತಿದೆ!
(ಹೋಗುವನು)